Advertisement

ಮಳೆ: ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಸೂಚನೆ

09:52 AM Nov 06, 2021 | Team Udayavani |

ಬೆಂಗಳೂರು: ಪ್ರಸ್ತುತ ವರ್ಷ ಅಕಾಲಿಕ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದು, ತುರ್ತು, ಅಲ್ಪಾವಧಿ, ದೀರ್ಘಾವಧಿ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಅವರು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಇನ್ನೆರಡು ದಿನಗಳ ಕಾಳ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿರುವ ಬಗ್ಗೆ ಹವಾಮಾನ ಮುನ್ಸೂಚನೆ ಇದೆ. ಬೆಂಗಳೂರು ಮಳೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮಳೆಯನ್ನು ನಿಭಾಯಿಸುವ ವಿಧಾನ ಬದಲಾಯಿಸಿ, ಮಳೆಯಿಂದ ಆಗುತ್ತಿರುವ ಹಾನಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದ ಮುಖ್ಯಮಂತ್ರಿಗಳು, ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿದ್ದು, ನಗರದಲ್ಲಿ ಮಳೆಯಿಂದಾಗುವ ಹಾನಿಯನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈ ಬಾರಿ ಮಳೆಯ ಕಾರಣ ಎಲ್ಲಲ್ಲಿ ಹಾನಿಯಾಗಿದೆ ಎನ್ನುವ ಬಗ್ಗೆ ಹಾಗೂ ಕೈಗೊಂಡಿರುವ ಕ್ರಮ ಮುಂದೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ಚರಂಡಿಯಿಂದ ನೀರು ಹೊರಬರುತ್ತದೆ ಎಂದರೆ ಅದನ್ನು ಸರಿಪಡಿಸುವುದು ಅಧಿಕಾರಿಗಳ ಜವಾಬ್ದಾರಿ. ಸಮಸ್ಯೆಯನ್ನು ಅರ್ಥಮಾಡಿಕೊಂಡು ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.

ತೀವ್ರ ಪ್ರವಾಹವಾಗುವ ಪ್ರದೇಶಗಳನ್ನು ಹಾಗೂ ಮುಖ್ಯ ಚರಂಡಿಗಳಲ್ಲಿ ಸಮಸ್ಯೆ ಇರುವಲ್ಲೆಲ್ಲಾ ಗುರುತಿಸಿ ಸರಿಪಡಿಸಬೇಕು. ಚರಂಡಿಗಳ ನಿರ್ಮಾಣ ಮಾಡುವಾಗ ಅವುಗಳ ವಿನ್ಯಾಸವನ್ನು ಸೂಕ್ತವಾಗಿ ಮಾಡಬೇಕು. ರಾಜಕಾಲುವೆಗಳ ಸುತ್ತಲು ಅಕ್ರಮ ಬಡಾವಣೆಗಳು ಬಂದಿವೆ. ಪ್ರಾರಂಭದಲ್ಲಿಯೇ ಅಕ್ರಮವನ್ನು ತಡೆಯಬೇಕಿತ್ತು. ಆದರೆ ಆಡಳಿತಾತ್ಮಕವಾಗಿ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸೂಚಿಸಿದರು.
ತೀವ್ರವಾಗಿ ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿಯಾದರೂ ತಕ್ಷಣವೇ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ನಗರದಲ್ಲಿ ಪ್ರತಿ 50 ಮೀಟರ್ ಗಳಿಗೆ ರೀಚಾರ್ಚಿಂಗ್ ಪಿಟ್ಸ್ ಅಗತ್ಯವಿದೆ. ಪ್ರಾಯೋಗಿಕವಾಗಿ ಈ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮೊದಲು ಕಾರ್ಯಗತಗೊಳಿಸಲು ಸೂಚನೆ ನೀಡಿದರು.

Advertisement

ಮಾಹಿತಿ ಸಲ್ಲಿಸಿ

ಬೆಂಗಳೂರಿನಲ್ಲಿನ ಮಳೆಯಾದಾಗ ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳನ್ನು ವಲಯವಾರು ವಿಭಜಿಸಿ, ತಗ್ಗು ಪ್ರದೇಶಗಳ ಪಟ್ಟಿ ನೀಡಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ನೀರು ನುಗ್ಗಲು ಕಾರಣಗಳೇನು ಎಂದು ಗುರುತಿಸಿ, ಅದನ್ನು ತಡೆಯಲು ಅಲ್ಪಾವಧಿ ಕ್ರಮ ಹಾಗೂ ದೀರ್ಘಾವಧಿ ಕ್ರಮಗಳೇನು ಎಂದು ಪಟ್ಟಿ ಮಾಡಲು ಸೂಚಿಸಿದರು.

ಒಳಚರಂಡಿಗಳ ಪೈಕಿ ಎಲ್ಲಿ ತೀವ್ರ ಸಮಸ್ಯೆ ಇದೆ ಅವುಗಳನ್ನು ಗುರುತಿಸಿ, ಎಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಅಂಥ ಎಷ್ಟು ಸ್ಥಳಗಳಿವೆ ಅವುಗಳನ್ನು ಗುರುತಿಸಲು ಪಟ್ಟಿ ಮಾಡಬೇಕು. ಸಮಗ್ರ ವರದಿಯನ್ನು ತಯಾರಿಸಿ ಅತಿಸೂಕ್ಷ್ಮ ಹಾಗೂ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರಬೇಕು ಎಂದು ಸೂಚಿಸಿದರು.

ಮಳೆಯಾದ ಸಂದರ್ಭದಲ್ಲಿ ಹಾನಿಯಾಗಲು ಎರಡು ಪ್ರಮುಖ ಕಾರಣಗಳೆಂದರೆ, ತಗ್ಗಿನ ಪ್ರದೇಶ ಹಾಗೂ ತಡೆಗೋಡೆಗಳಲ್ಲಿಲ್ಲದಿರುವುದು. ಆದ್ದರಿಂದ ಸೂಕ್ತ ಯೋಜನೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು.

ಸಮರೋಪಾದಿಯಲ್ಲಿ ಹೂಳು ತೆಗೆಯಿರಿ

ಸಮರೋಪಾದಿಯಲ್ಲಿ ಒಳಚರಂಡಿಗಳ ಹೂಳು ತೆಗೆಯುವ ಕೆಲಸ ಕೈಗೊಳ್ಳಲು ಸೂಚನೆ ನೀಡಿದ ಮುಖ್ಯಮಂತ್ರಿಗಳು ಒಟ್ಟು 842 ಕಿಮಿ ಪೈಕಿ 389 ಕಿ.ಮೀ ತಡೆಗೋಡೆ ನಿರ್ಮಿಸಲಾಗಿದೆ. ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ 75 ಕಿ.ಮೀ ತಡೆಗೋಡೆ ಈಗಾಗಲೇ ನಿರ್ಮಿಸಲಾಗಿದ್ದು, ಬಾಕಿ 15 ಕಿ.ಮೀ ಗೆ ತಡೆಗೋಡೆ ನಿರ್ಮಿಸಬೇಕಿದೆ. 50 ಕಿ.ಮೀ ಹಳೆ ತಡೆಗೋಡೆಗಳ ಪುನರ್ ನಿರ್ಮಾಣ ಕಾರ್ಯವೂ ಚುರುಕುಗೊಳ್ಳಬೇಕು ಎಂದರು.

ತಂಡಗಳ ನಿಯೋಜನೆ

ಪ್ರಸ್ತುತ 64 ರಕ್ಷಣಾ ತಂಡಗಳಿದ್ದು, ಪ್ರತಿ ತಂಡದಲ್ಲಿ 15 ಜನರಿದ್ದು, ಸಿಬ್ಬಂದಿ ಸಂಖ್ಯೆಯನ್ನು ಕನಿಷ್ಠ 30 ಕ್ಕೆ ಹೆಚ್ಚಿಸಬೇಕು. ಅವರನ್ನು ತಕ್ಷಣವೇ ನಿಯೋಜಿಸಲು ಸೂಚನೆ ನೀಡಿದರು. ಬಿಬಿಎಂಪಿ ವತಿಯಿಂದ ಪ್ರತಿ ತಂಡದಲ್ಲಿ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಹೆಚ್ಚಿಸಲು ಸೂಚಿಸಿದರು. ಬೆಂಗಳೂರಿಗೆ ಪ್ರತ್ಯೇಕ ಎಸ್.ಡಿ.ಆರ್.ಎಫ್ ತಂಡಗಳನ್ನು ನಾಲ್ಕು ವಲಯಗಳಲ್ಲಿಯೂ ಮೀಸಲಿರಿಸಲು ಸೂಚಿಸಿದ ಮುಖ್ಯಮಂತ್ರಿಗಳು, ಸಿಬ್ಬಂದಿಗೆ ಸೂಕ್ತ ತರಬೇತಿಯನ್ನು ನೀಡಲು ಹಾಗೂ ಅಗತ್ಯವಿರುವ ಉಪಕರಣಗಳನ್ನೂ ಖರೀದಿಸಲು ಪಟ್ಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಿದರು. ನಾಗರಿಕಾ ರಕ್ಷಣಾ ಹಾಗೂ 500 ಹೋಮ್ ಗಾರ್ಡ್‍ಗಳು, ಸ್ವಯಂಸೇವಕರ ಸೇವೆಯನ್ನೂ ಪಡೆಯಲು ತಿಳಿಸಿದರು.

ಅನುದಾನ

ಬಿಬಿಎಂಪಿ ಮತ್ತು ಎನ್‍ಡಿಆರ್‍ಎಫ್ ವತಿಯಿಂದ ಕೈಗೊಳ್ಳುವ ತುರ್ತು ರಕ್ಷಣೆ ಮತ್ತು ಪರಿಹಾರಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದ್ದು, ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ ಮುಖ್ಯಮಂತ್ರಿಗಳು, ಎಸ್.ಟಿ.ಪಿ ಗಳು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಸಾಮಥ್ರ್ಯವನ್ನು ಹೆಚ್ಚಿಸಲು ಸೂಚಿಸಿದರು. ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್.ಡಿ.ಆರ್.ಎಫ್ ತಂಡಗಳು ತುರ್ತಾಗಿ ಸ್ಥಳಕ್ಕೆ ತೆರಳಬೇಕು ಎಂದು ಸೂಚಿಸಿದರು.

ಪ್ರತಿ ತಿಂಗಳು ಬಿಬಿಎಂಪಿ ಆಯುಕ್ತರು ಹಾಗೂ ವಲಯ ಆಯುಕ್ತರು ಸಭೆ ನಡೆಸಿ ಸಮಸ್ಯೆಗಳನ್ನು ನನಗೆ ವರದಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ರಸ್ತೆಗಳನ್ನು ಚಾಲನಾಸ್ನೇಹಿಯಾಗುವಂತೆ ಮಾಡಲು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಸಭೆಗಳಲ್ಲಿ ಕೈಗೊಳ್ಳುವ ನಿರ್ಧಾರಗಳು ತಳಮಟ್ಟದವರೆಗೂ ಹೋಗಬೇಕು. ಜೂನಿಯರ್ ಇಂಜಿನಿಯರ್‍ಗಳನ್ನು ಒಳಗೊಂಡ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಸಚಿವ ಡಾ:ಅಶ್ವತ್ಥ್ ನಾರಾಯಣ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ: ಮನೋಜ್ ರಾಜನ್, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಮತ್ತು ಆರಕ್ಷಕ ಮಹಾನಿರೀಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next