ಶಿರಸಿ: ಮಳೆ ನೀರಿನ ಹಾಗೂ ಪರಿಸರ, ಗ್ರಾಮೀಣಾಭಿವೃದ್ದಿ ಕುರಿತು ಜಾಗೃತಿ ಮಾಡುವ ರೇನ್ ಸೆಂಟರ್ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸೋಮವಾರ ಅವರು ಕಳವೆ ಕಾನ್ಮನೆಯಲ್ಲಿ ಕೆರೆಗಳ ಮಾದರಿ ವೀಕ್ಷಿಸಿ ವನರಂಗ ಸಭಾ ಭವನ ಉದ್ಘಾಟನೆ ಮಾಡಿ, ವೃಕ್ಷಾರೋಪಣ ನಡೆಸಿ ಮಾತನಾಡಿದರು.
ಕಳವೆಯನ್ನು ಮಾದರಿ ಕೇಂದ್ರವಾಗಿಸಿ ಇಡೀ ರಾಜ್ಯಕ್ಕೆ ವಿಸ್ತರಿಸುವದಾಗಿ ಪ್ರಕಟಿಸಿದ ಅವರು, ಜಲ ಸಂರಕ್ಷಣೆಯ ಹುಚ್ಚಿನಲ್ಲಿ ಆನಂದವಿದೆ. ಈ ಹುಚ್ಚನ್ನು ಶಿವಾನಂದ ಕಳವೆ ನನಗೆ ಹಿಡಿಸಿದ್ದಾರೆ ಎಂದು ಹೇಳಿದರು.
ಎಲ್ಲ ಗ್ರಾಮದಲ್ಲಿನ ಕೆರೆಗಳನ್ನು ಪಂಚಾಯತಿಗಳಿಗೆ ಹಸ್ತಾಂತರಿಸಿ ಕೆರೆಗಳ ಅಭಿವೃದ್ದಿಗೊಳಿಸುತ್ತಿದ್ದೇವೆ. ಸಣ್ಣ ಪುಟ್ಟ ಕೆರೆಗಳೂ ಸೇರಿ 46 ಸಾವಿರ ಕೆರೆ ಅಭಿವೃದ್ದಿ ಈವರೆಗೆ ಮಾಡಿದ್ದೇವೆ ಎಂದರು.
ದೇಶದಲ್ಲೇ ಜಲಧಾರೆಯ ಅಭಿವೃದ್ದಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿ ಇದೆ. 2. 42 ಲಕ್ಷ ಕಾಮಗಾರಿ ಆಗಿದೆ. ಇದಕ್ಕೆ ಜಲ ಜಾಗೃತಿಯ ಅಗತ್ಯ ಇದ್ದಾಗ ಶಿವಾನಂದ ಕಳವೆಯವರ ಪಾತ್ರವೂ ಇದೆ ಎಂದು ಬಣ್ಣಿಸಿದ ಅವರು, ಜಾಬ್ ಕಾರ್ಡ ಇದ್ದವರಿಗೆ ಜಾಬ್ ಕೊಡುವ ಕೆಲಸ ಆಗಿದೆ. ಇದರಿಂದ ಲಕ್ಷಾಂತರ ಕಾಮಗಾರಿಗಳನ್ನು ತೆಗೆದುಕೊಂಡಿದ್ದೇವೆ. ನರೇಗಾ ಯೋಜನೆಯಲ್ಲೂ ಮುಂಚೂಣಿಯಲ್ಲಿ ಇದೆ. ಈ ಬಾರಿ 16.80 ಕೋ. ಮಾನವ ದಿನಗಳ ಕೆಲಸ ಮಾಡಿದ್ದೇವೆ. ನಮ್ಮ ಕೆಲಸ ನೋಡಿ ಇನ್ನೂ 20 ರೂ.ಕೂಲಿಯನ್ನು ಕೇಂದ್ರ ಸರಕಾರ ಹೆಚ್ಚಿಸಿದೆ ಎಂದರು.
ಶಿವಾನಂದ ಕಳವೆ ರೇನ್ ಸೆಂಟರ್ ಪ್ರಸ್ತಾಪಿಸಿದರು.
ವಿಶೇಷಾಧಿಕಾರಿ ಜಯರಾಮ್, ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎಸ್.ಜಿ.ಹೆಗಡೆ ಇತರರು ಇದ್ದರು.