ಪುಂಜಾಲಕಟ್ಟೆ: ಕಳೆದ ಹಲವಾರು ದಿನಗಳಿಂದ ಸುರಿದ ಭಾರೀ ಮಳೆಗೆ ಗುಡ್ಡ ಕುಸಿದು ಮನೆಯೊಂದಕ್ಕೆ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ಗ್ರಾಮದ ದೇವರಮಾರುವಿನಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಇಲ್ಲಿನ ಹರೀಶ್ ಕುಲಾಲ್ ಅವರ ಮನೆಯ ಪಕ್ಕದ ಗುಡ್ಡದ ಮಣ್ಣು ಕುಸಿದು ಮನೆಯ ಗೋಡೆಯ ಮೇಲೆ ಬಿದ್ದು ಗೋಡೆ ಮತ್ತು ಛಾವಣಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿ ಹರೀಶ್ ಕುಲಾಲ್, ಅವರ ಅತ್ತಿಗೆ, ತಂಗಿ ಮತ್ತು ಭಾವ ಬೇರೆ ಕೋಣೆಯಲ್ಲಿ ಮಲಗಿದ್ದ ಕಾರಣ ಅಪಾಯ ತಪ್ಪಿದೆ. ಗುಡ್ಡ ಮತ್ತಷ್ಟು ಜರಿಯುವ ಅಪಾಯವಿರುವುದರಿಂದ ಮನೆಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲಾಗಿದೆ. ಸ್ಥಳೀಯರಾದ ಪ್ರಕಾಶ್ ಕರ್ಲ ಮತ್ತಿತರರು ತಾತ್ಕಾಲಿಕ ವಾಸಕ್ಕೆ ನೆರವು ನೀಡಿದ್ದಾರೆ.
Advertisement
ಬಡಗಕಜೆಕಾರು ಗ್ರಾ.ಪಂ. ಅಧ್ಯಕ್ಷ ವಜ್ರ ಪೂಜಾರಿ, ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಳಿಕೆ: ಅಳಿಕೆ ಗ್ರಾಮದ ಕಾನತ್ತಡ್ಕ-ರೆಂಜಡಿ ರಸ್ತೆಗೆ ಗುಡ್ಡ ಕುಸಿದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾರೀ ಮಳೆಗೆ ಶುಕ್ರವಾರ ರಾತ್ರಿ ಗುಡ್ಡ ಕುಸಿಯಲು ಆರಂಭವಾಗಿತ್ತು. ಶನಿವಾರ ಬೆಳಗ್ಗೆ ರಸ್ತೆಯಲ್ಲಿ ಮಣ್ಣು ತುಂಬಿ ನಡೆದಾಡಲೂ ಆಗಲಿಲ್ಲ. ಸುಮಾರು 50 ಅಡಿ ಎತ್ತರದ ಗುಡ್ಡ ಸುಮಾರು 50 ಅಡಿಯುದ್ದಕ್ಕೂ ಕುಸಿದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೂ ನಡೆದಾಡಲೂ ಸಾಧ್ಯವಿರಲಿಲ್ಲ. ಸ್ಥಳೀಯರಾದ ರೆಂಜಡಿ ನೀಲಪ್ಪ ಗೌಡ ಮತ್ತು ಅಬ್ದುಲ್‌ಹಮೀದ್ ಅವರು ರಸ್ತೆಗೆ ಉರುಳಿದ ಗಿಡ, ಮರ, ಪೊದರುಗಳನ್ನು ಹಾಗೂ ಸ್ವಲ್ಪ ಭಾಗದಲ್ಲಿ ಮಣ್ಣನ್ನು ತೆರವುಗೊಳಿಸಿ, ನಡೆದಾಡಲು ಅನುಕೂಲ ಮಾಡಿದ್ದರು. ಅಳಿಕೆ ಗ್ರಾ.ಪಂ.ಗೆ ಮಾಹಿತಿ ನೀಡಿದ ತತ್‌ಕ್ಷಣ ಪಿಡಿಒ ಮತ್ತು ಅಧ್ಯಕ್ಷ ಪದ್ಮನಾಭ ಪೂಜಾರಿ ಅವರು ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ, ಜೆಸಿಬಿ ಮೂಲಕ ಮಧ್ಯಾಹ್ನ ಮಣ್ಣನ್ನು ತೆರವುಗೊಳಿಸಿದರು. ಕರ್ಪೆ: ಗುಡ್ಡ ಕುಸಿದು ತಡೆಗೋಡೆಗೆ ಹಾನಿ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಸಿದ್ದಕಟ್ಟೆ- ಕರ್ಪೆ ರಸ್ತೆ ಬದಿಯ ಗುಡ್ಡ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಕುಸಿದು ಬಿದ್ದು ತಡೆಗೋಡೆಗೆ ಹಾನಿಯಾದ ಘಟನೆ ಶುಕ್ರವಾರ ಸಂಭವಿಸಿದೆ. ಬೆಳಗ್ಗೆ ರಸ್ತೆಗೆ ಕಲ್ಲು ಮಣ್ಣು ಬಿದ್ದು ಜನ, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳೀಯರು ಕಲ್ಲು ಮಣ್ಣು ತೆರವುಗೊಳಿಸಿದರು. ರಸ್ತೆ ಬದಿಯ ಗುಡ್ಡದಲ್ಲಿ ಮನೆಗಳಿದ್ದು ರಸ್ತೆ ಬದಿ ತಡೆಗೋಡೆ ನಿರ್ಮಿಸಲಾಗಿತ್ತು. ತಡೆಗೋಡೆ ಸಹಿತ ಗುಡ್ಡ ಕುಸಿದುದರಿಂದ ಸುಮಾರು 5ಲಕ್ಷ ರೂ. ನಷ್ಟವಾಗಿದ್ದು, ತುರ್ತು ಪರಿಹಾರಕ್ಕೆ ಬಂಟ್ವಾಳ ಶಾಸಕರಿಗೆ ಮತ್ತು ಕಂದಾಯ ಇಲಾಖಾಧಿಕಾರಿಗಳಿಗೆ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.
Related Articles
ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಕೊಳ್ನಾಡು ಗ್ರಾಮದಲ್ಲಿ ಕಾಲುಸಂಕ ಮುರಿದು ಬಿದ್ದು, ಕಾಲುದಾರಿ ಸಂಪರ್ಕ ಕಡಿತಗೊಂಡಿದೆ. ಕೊಳ್ನಾಡು ಗ್ರಾಮದ ಸೆರ್ಕಳ ಪೀಲಿಯಡ್ಕದಲ್ಲಿ ಕಿರು ನದಿಗೆ ಅಡ್ಡಲಾಗಿ ಕಟ್ಟಿರುವ ಮುರಿದು ಬಿದ್ದಿದೆ. ಇದು ನೂರಾರು ಕುಟುಂಬಗಳಿಗೆ ಕಾಲುದಾರಿಯಿಲ್ಲದಂತೆ ಮಾಡಿದೆ. ಇನ್ನೂ ಹಲವೆಡೆ ತೋಟಗಳಿಗೆ ಹಾನಿಯಾಗಿದೆ. ರಸ್ತೆಯಲ್ಲಿ ಮೋರಿಯೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಸೆರ್ಕಳ-ಸಾಲೆತ್ತೂರು ಸಂಪರ್ಕಿಸುವ ಕಾಲುದಾರಿ ಕಡಿತಗೊಂಡಿದ್ದು, ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಸ್ಥಳಕ್ಕೆ ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯರಾದ ಸಿ.ಎಚ್. ಅಬೂಬಕ್ಕರ್, ಹಮೀದ್, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ಹಾಗೂ ಜಿ.ಪಂ. ಎಂಜಿನಿಯರ್ ನಾಗೇಶ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Advertisement