ಸುಳ್ಯ/ಸುಬ್ರಹ್ಮಣ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ಕೆಲವೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಕೆಲವೆಡೆ ಧಾರಕಾರ ಮಳೆ ಹಾಗೂ ಕೆಲವೆಡೆ ಕೇವಲ ಹನಿ ಮಳೆಯಾಗಿದೆ. ಕೆಲವೆಡೆ ಗುಡುಗು – ಗಾಳಿ ಮಾತ್ರವೇ ಬಂದಿದೆ. ಪಂಜ, ಬಳ್ಪ, ಬೆಳ್ಳಾರೆ, ಸುಳ್ಯ, ಸಂಪಾಜೆ, ಕೊಲ್ಲಮೊಗ್ರು, ಸುಬ್ರಹ್ಮಣ್ಯ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.
ಬೆಳ್ತಂಗಡಿ: ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನಲ್ಲಿ ರಾತ್ರಿ 8 ಗಂಟೆ ಬಳಿಕ ಹಲವೆಡೆ ಗಾಳಿ, ಮಿಂಚು, ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸಂಜೆವರೆಗೆ ಬಿಸಿಲಿನಿಂದ ಕೂಡಿದ ವಾತಾವರಣವಿದ್ದು ರಾತ್ರಿ 8ರ ಬಳಿಕ ಚಾರ್ಮಾಡಿ, ಮುಂಡಾಜೆ ಸಹಿತ ಇತರೆಡೆ ಉತ್ತಮ ಮಳೆ ಕಂಡುಬಂತು.
ಭಾರೀ ಸಿಡಿಲು ಮಿಂಚಿನೊಂದಿಗೆ ಮುಂಡಾಜೆ, ಸತ್ಯನಪಲ್ಕೆ, ಉಜಿರೆ, ಬೆಳ್ತಂಗಡಿ, ದಿಡುಪೆ, ಮಾಚಾರ್, ಕೊಕ್ಕಡ – ಪಾರ್ಪಿಕಲ್ಲು ಮುಂತಾದ ಕಡೆ ಗುಡುಗು ಸಹಿತ ಮಳೆಯಾಗಿದೆ.
ಸೆಖೆಯ ವಾತಾವರಣ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಸೆಖೆಯ ವಾತಾವರಣ ಮುಂದುವರಿದಿದೆ. ಸಂಜೆಯ ವೇಳೆ ಬೆಳ್ತಂಗಡಿ, ಕಡಬ, ಉಪ್ಪಿನಂಗಡಿ, ಸುಳ್ಯ ತಾಲೂಕಿನ ಕೆಲವೆಡೆ ಸಾಧಾರಣ ಮಳೆಯಾಗಿದೆ.
ಮುಂದಿನ ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ ಸೋಮವಾರ ಗರಿಷ್ಠ 35.6 ಡಿಗ್ರಿ ಹಾಗೂ ಕನಿಷ್ಠ 26.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.