ಗೌರಿಬಿದನೂರು: ತಾಲೂಕಿನ ಬಹುತೇಕ ಭಾಗಗಳಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ಭೂಮಿ ತಂಪಾಗಿ ಹಳ್ಳ-ಕೊಳ್ಳ, ಕೆರೆ-ಕಟ್ಟೆಗಳಿಗೆಹೆಚ್ಚಿನಪ್ರಮಾಣದಲ್ಲಿ ನೀರು ಹರಿದು ಬಂದಿದೆ. ತಾಲೂಕಿನ ಜೀವನಾಡಿ ಉತ್ತರ ಪಿನಾಕಿನಿ ನದಿ ಮೈದುಂಬಿದೆ.
ತಾಲೂಕಿನಲ್ಲಿ ಕೆಲವು ದಿನಗಳಿಂದ ಮೋಡಮುಸುಕಿದ ವಾತಾವರಣ, ಆಗಾಗ ತುಂತುರಾಗಿ ಬೀಳುತ್ತಿದ್ದ ಮಳೆ, ಶನಿವಾರ ರಾತ್ರಿ ಧಾರಾಕಾರವಾಗಿ ಸುರಿದು, ಭಾನುವಾರವೂ ಅಲ್ಪ ಸ್ವಲ್ಪ ಬಂದ ಕಾರಣ ಬಹುತೇಕ ಕೆರೆ ಕಟ್ಟೆ, ನದಿ ನಾಲೆ, ಜಲ ಮೂಲಗಳಿಗೆ ಜೀವ ಕಳೆ ಬಂದಿದೆ. ಬಾಡಿ ಬೆಂಡಾಗಿದ್ದ ಗಿಡ ಮರಗಳು ಈಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಎಲ್ಲೆಡೆ ಶುಭ್ರ ವಾತಾವರಣಕಾಣುತ್ತಿದೆ. ಕೆಲವು ಕಡೆ ಬೆಳೆ ಜಲಾವೃತವಾಗಿ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ತಾಲೂಕಿನ ವಿವಿಧೆಡೆ ಮಳೆ ಪ್ರಮಾಣಪರಿಶೀಲಿಸಿದರು.
ಎಚ್.ಎನ್. ವ್ಯಾಲಿ ನೀರಿಗೂ ಸೇರ್ಪಡೆ: ಉತ್ತಮ ಮಳೆಯ ಪರಿಣಾಮ ಮಂಚೇನಹಳ್ಳಿಯವ್ಯಾಪ್ತಿಯಲ್ಲಿ ಉತ್ತರ ಪಿನಾಕಿನಿ ನದಿಗೆ ಅಲ್ಪ ಸ್ವಲ್ಪ ನೀರು ಸೇರಿದ್ದು, ನಂತರ ತುಂಬಿ ಹರಿಯ ತೊಡಗಿದೆ. ಸಮಯ ಕಳೆದಂತೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜನರು ನೀರನ್ನು ನೋಡಲು ಮುಗಿಬಿದ್ದರು. ನಗರ ಹೊರವಲಯದಲ್ಲಿರುವ ಕಿಂಡಿ ಅಣೆಕಟ್ಟು ಬಳಿ ಸೇರಿದ ನದಿ ನೀರು, ಸ್ವಲ್ಪ ಪ್ರಮಾಣದಲ್ಲಿ ಎಚ್.ಎನ್. ವ್ಯಾಲಿ ನೀರಿನೊಂದಿಗೆಮರಳೂರು ಕೆರೆಗೆ ಹರಿದರೆ, ಉಳಿದ ನೀರು ನದಿಯ ಮೂಲಕ ನಗರದತ್ತ ಹರಿದಿದೆ.
ದಶಕಗಳ ಬಳಿಕ ಈ ನದಿಯಲ್ಲಿ ನೀರು ಹರಿಯುವುದನ್ನು ನೋಡಲು ನಾಗರಿಕರು ಕಿಂಡಿ ಅಣೆಕಟ್ಟಿನ ಬಳಿ ಜಮಾಯಿಸಿದರು ಇನ್ನೂಕೆಲವರು ನದಿ ನೀರಿಗೆ ಬಾಗಿನ ಅರ್ಪಿಸಿದರು.
ನದಿಗೆ ಜೀವಕಳೆ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್. ಎಚ್.ಶಿವಶಂಕರರೆಡ್ಡಿ ಮಾತನಾಡಿ, ದಶಕಗಳಿಂದ ಈ ಭಾಗದಲ್ಲಿ ಬರಗಾಲದ ಛಾಯೆ ಆವರಿಸಿದೆ. ಸಮರ್ಪಕ ಮಳೆಯಿಲ್ಲದೆ ನದಿಯಲ್ಲಿ ನೀರು ಹರಿಯುವುದೇ ಕಷ್ಟವಾಗಿತ್ತು. ಮಂಚೇನಹಳ್ಳಿ ಹಾಗೂ ತೊಂಡೇಬಾವಿಹೋಬಳಿ ವ್ಯಾಪ್ತಿಯಲ್ಲಿ ಬಿದ್ದ ಉತ್ತಮ ಮಳೆಯಿಂದ ಪಿನಾಕಿನಿ ನದಿಗೆ ಜೀವಕಳೆ ಬಂದಿದೆ ಎಂದು ಹೇಳಿದರು.
ಮುಖಂಡ ಕೆ.ಎಚ್.ಪುಟ್ಟಸ್ವಾಮಿಗೌಡ ತಮ್ಮ ಬೆಂಬಲಿಗರೊಂದಿಗೆ ಕಿಂಡಿ ಅಣೆಕಟ್ಟು ಬಳಿ ತೆರಳಿ ಉತ್ತರ ಪಿನಾಕಿನಿ ನದಿ ನೀರಿಗೆ ಬಾಗಿನ ಅರ್ಪಿಸಿದರು.