ಚಿತ್ರದುರ್ಗ: ಕಳೆದೊಂದು ವಾರದಿಂದ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿದೆ. ಇದರಿಂದ ಹಳೆಯ ಮನೆ ಗೋಡೆಗಳು ಕುಸಿದು ಬೀಳುತ್ತಿವೆ. ಆದ್ದರಿಂದ ಯಾರೂ ಕೂಡ ಹಳೆಯ ಮನೆಗಳಲ್ಲಿ ವಾಸ ಮಾಡಬೇಡಿ. ಮಳೆ ನಿಲ್ಲುವವರೆಗೆ ಶಾಲೆ, ಸಮುದಾಯ ಭವನ ಅಥವಾ ದೇವಸ್ಥಾನಗಳಲ್ಲಿ ಆಶ್ರಯ ಪಡೆಯಿರಿ. ಇದಕ್ಕೆ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡುತ್ತಾರೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಮಳೆಯಿಂದಾಗಿ ಮನೆ ಗೋಡೆ ಕುಸಿದಿರುವ ತಾಲೂಕಿನ ಇಂಗಳದಾಳ್, ಜೆ.ಎನ್. ಕೋಟೆ, ನರೇನಹಾಳ್ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.
ಜೆ.ಎನ್. ಕೋಟೆ ಗ್ರಾಮದಲ್ಲಿ 26 ಮನೆಗಳು, ನರೇನಹಾಳ್ 7, ಕಳ್ಳಿರೊಪ್ಪದಲ್ಲಿ 3, ಇಂಗಳದಾಳ್‌ನಲ್ಲಿ 15, ಡಿ.ಎಸ್. ಹಳ್ಳಿಯಲ್ಲಿ 10 ಹಾಗೂ ಕ್ಯಾದಿಗೆರೆಯಲ್ಲಿ 10 ಮನೆಗಳ ಗೋಡೆ ಕುಸಿದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಶಾಸಕರು ಕೈ ಮುಗಿದು ಬೇಡುತ್ತೇನೆ, ಶಿಥಿಲಗೊಂಡಿರುವ ಹಾಗೂ ಹಳೆಯ ಮನೆಗಳಲ್ಲಿ ಯಾರೂ ಇರಬೇಡಿ. ಮಳೆಯಿಂದ ತೊಂದರೆಯಾಗುತ್ತದೆ ಎಂದರು.
ಎಲ್ಲಾ ಕಡೆ ಬದಲಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಬಹಳ ಕಡೆ ಗೋಡೆಗಳು ಬೀಳುವ ಸ್ಥಿತಿ ಇದೆ. ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳ ಜೊತೆ ಮಾತನಾಡಿ ಅಗತ್ಯ ವ್ಯವಸ್ಥೆ ಮಾಡಿಸುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.
ಈಗಾಗಲೇ ಬಿದ್ದಿರುವ ಮನೆಗಳಿಗೆ ಸರ್ಕಾರದಿಂದ ಬರುವ ಪರಿಹಾರವನ್ನು ಅಧಿಕಾರಿಗಳು ವರದಿ ಸಲ್ಲಿಸಿ ಬಿಡುಗಡೆ ಮಾಡಿಸಿಕೊಡಬೇಕು ಎಂದು ಸೂಚಿಸಿದ ಅವರು, ಶಿಥಿಲವಾಗಿರುವ ಮನೆಗಳ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.
ಈ ವೇಳೆ ಕಂದಾಯ ಇಲಾಖೆ ಆರ್‌ಐ ಶರಣಪ್ಪ, ಜೆ.ಎನ್. ಕೋಟೆ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ಮತ್ತಿತರರು ಇದ್ದರು.