ಬೆಳ್ತಂಗಡಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಬಳಿಕ ಗುಡುಗು, ಮಿಂಚು ಸಹಿತ ಭಾರಿ ಮಳೆಗೆ ನೇತ್ರಾವತಿ ಮೃತ್ಯುಂಜಯ ನದಿಗಳು ಉಕ್ಕಿ ಹರಿದಿದ್ದು ಮರಮಟ್ಟುಗಳ ತ್ಯಾಜ್ಯ ರಾಶಿ ತೇಲಿಬಂದು ಕಿಂಡಿ ಅಣೆಕಟ್ಟುಗಳಲ್ಲಿ ಸಿಲುಕಿದೆ.
ಚಿಕ್ಕಮಗಳೂರು, ಚಾರ್ಮಾಡಿ ಭಾಗಗಳಲ್ಲಿ ಸಂಜೆ ಬಳಿಕ ಸತತ ಮಳೆಯಾಗಿತ್ತು. ಹೀಗಾಗಿ ನದಿಪಾತ್ರಗಳಲ್ಲಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ಕಿರುಸೇತುವೆ ಮುಳುಗಿದ್ದು ಕೆಲವೆಡೆ ಕೃಷಿ ತೋಟಗಳಿಗೆ ನೀರು ನುಗ್ಗಿತ್ತು.
ಧರ್ಮಸ್ಥಳ, ಉಜಿರೆ, ಮುಂಡಾಜೆ, ದಿಡುಪೆ, ಕುಕ್ಕಾವು, ಮಿತ್ತಬಾಗಿಲು, ಚಾರ್ಮಾಡಿ ಸೇರಿದಂತೆ ಭಾರಿ ಮಳೆ ಸುರಿದ ಪರಿಣಾಮ ದಿಡುಪೆ ಏಳುವರೆ ಹಳ್ಳ, ನೇತ್ರಾವತಿ, ಮೃತ್ಯುಂಜಯ ನದಿಗಳ ಕಿಂಡಿ ಅಣೆಕಟ್ಟುಗಳಲ್ಲಿ ರಾಶಿ ರಾಶಿ ಟನ್ ಗಟ್ಟಲೆ ಮರಮಟ್ಟು ಕಸಕಡ್ಡಿ ರಾಶಿ ಶೇಖರಣೆಯಾಗಿದೆ.
ಮುಂಡಾಜೆ ಶ್ರೀ ಪರಶುರಾಮ ದೇವಸ್ಥಾನದ ಎದುರಿನ ನಿವಾಸಿ ಅಬ್ದುಲ್ ರಶೀದ್ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಭಾರೀ ಹಾನಿಯಾಗಿದೆ.
ಕಡಿರುದ್ಯಾವರ ಗ್ರಾಮದ ಕುಚ್ಚೂರು ಬೈಲು ಎಂಬಲ್ಲಿ ತೋಟ ಹಾಗೂ ಇತರ ಅಡಿಕೆ ತೋಟಗಳಿಗೆ ಹಳ್ಳಗಳ ನೀರು ನುಗ್ಗಿತ್ತು. ಮಂಗಳವಾರ ಮುಂಜಾನೆವರೆಗೂ ಮಳೆ ನಿರಂತರವಾಗಿ ಸುರಿದಿದೆ.