ಮೋಡದಿಂದ ಬಿಂದುವಿನ ರೂಪದಲ್ಲಿ ಮಳೆಯು ಭೂಮಿಗೆ ಸೇರುವ ಪಯಣ ಅಮೋಘವಾದದ್ದು, ಮಲೆನಾಡಿನಲ್ಲಿ ಮಳೆಯ ಆಗಮನ ಒಂದು ಹಬ್ಬದಂತೆ ಭಾಸವಾಗುತ್ತದೆ. ಪ್ರಕೃತಿಯಲ್ಲಿ ಮಳೆಯ ಆಗಮನವಾದಾಗ ಏನೋ ಒಂದು ಲವಲವಿಕೆ, ಬಿಸಿಲಿನ ಬೇಗೆಯಿಂದ ತತ್ತರವಾದ ಬರಡು ಭೂಮಿ ಹಚ್ಚಹಸುರಾಗಿ ನಲಿಯುತ್ತದೆ. ಬಿರು ಬೇಸಗೆಯಲ್ಲಿ ಮಾಗಿದ ಮಾವಿನ ಹಣ್ಣನ್ನು ನೀಡಿದ ಮರ ಇಂದು ವಸಂತನ ಆಗಮನಕ್ಕೆ ಚಿಗುರೊಡೆದು ಸಂತಸ ವ್ಯಕ್ತಪಡಿಸುತ್ತದೆ.
ಮಳೆಯೇ ಹಾಗೆ, ವಾತಾವರಣದಲ್ಲಿ ಹಲವಾರು ಬಗೆಯ ಬದಲಾವಣೆಗಳನ್ನು ತರುತ್ತದೆ. ಮಲೆನಾಡ ಜನರಿಗೆ ಈ ಮಳೆಯಲ್ಲಿ ಹಲವು ವಿಧಗಳಿವೆ. ಮುಂಜಾನೆ ಬರುವ ಚುಮುಚುಮು ಮಳೆ,ಒಮ್ಮೆ ಬಂದು ಅರೆಕ್ಷಣ ನಿಂತು ಮತ್ತೆ ಬರುವ ಪಿರಿಪಿರಿ ಮಳೆ. ಧೋ ಎಂದು ಗಾಳಿಯೊಡನೆ ಬರುವಾಗ ಗಾಳಿಮಳೆ, ಧಾರಾಕಾರವಾಗಿ ಗುಡುಗು-ಸಿಡಿಲಿನೊಂದಿಗೆ ಬರುವ ಮಳೆ ಹೀಗೆ ಹಲವಾರು ವಿಧಗಳು.
ಮಳೆ ಬಂದಾಗಲೆಲ್ಲ ಭುವಿಯೂ ತಣ್ಣಗಿರಿಸುವುದರ ಜತೆ ಮನುಜರಲ್ಲಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸುತ್ತಲೂ ಇರುತ್ತದೆ.
ಮಳೆ ಬಂದರೆ ಸಾಕು ನಾವೆಲ್ಲಾ ಭಾವನಾತ್ಮಕವಾಗಿ ನಮ್ಮ ಶಾಲಾ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತೇವೆ. ಬಣ್ಣಬಣ್ಣದ ಕೊಡೆಗಳ ನೋಟ, ಮುಂಜಾವಿನ ಮಳೆಯಿಂದ ಒದ್ದೆಯಾದ ಸಮವಸ್ತ್ರ, ರಸ್ತೆಯ ಹೊಂಡದ ನೀರನ್ನು ಗೆಳೆಯರಿಗೆ ರಟ್ಟಿಸಿ ಸಿಕ್ಕಿದ ಖುಷಿ.ಮಳೆಯೆಂದರೆ ಹೀಗೆ ನೆನಪಿನ ಬುತ್ತಿ ತೆರೆಯುತ್ತಾ ಹೋಗುತ್ತದೆ. ಮಳೆ ಒಂದು ರೂಪಕ. ನಮ್ಮ ಜೀವನದಲ್ಲಿ ಬರುವ ಹೊಸತನವನ್ನು ಇದು ಸೂಚಿಸುತ್ತದೆ. ಬರಡು ಭೂಮಿಯಂತೆ ಉತ್ಸಾಹ ಕಳೆದುಕೊಂಡಿರುವ ನಮಗೆ ಮಳೆಯ ಆಗಮನ ಜೀವನೋತ್ಸಾಹ ಹೆಚ್ಚಿಸುತ್ತದೆ. ಬದುಕುವಂತೆ ಪ್ರೇರೇಪಿಸುತ್ತದೆ.
ಕೀರ್ತಿ ಗೋಖಲೆ
ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ