Advertisement

Rain Alert: ಮಧ್ಯ ಕರ್ನಾಟಕದಲ್ಲಿ ಭಾರೀ ಮಳೆ: ಜನ ತತ್ತರ

12:16 AM Aug 22, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ರಾಜ್ಯದ ಬಯಲು ಸೀಮೆ ಭಾಗಗಳಲ್ಲಿ 2 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೆರೆ ಕಟ್ಟೆಗಳು ತುಂಬಿದ್ದು, ಹಲವೆಡೆ ಕೋಡಿ ಬಿದ್ದು ಅಪಾರ ಹಾನಿ ಸಂಭವಿಸಿವೆ. ಬರದ ಛಾಯೆ ಆವರಿಸಿದ್ದ ಮಧ್ಯಕರ್ನಾಟಕದಲ್ಲಿ ಧಾರಾಕಾರ ಮಳೆಯಿಂದ ಜನ ನಿಟ್ಟುಸಿರು ಬಿಟ್ಟಿದ್ದು, ಪ್ರಮುಖ ಕೆರೆಗಳು ಭರ್ತಿಯಾಗಿವೆ. ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.

Advertisement

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬೇಡರೆಡ್ಡಿಹಳ್ಳಿಯಲ್ಲಿ ಅತೀ ಹೆಚ್ಚು 114 ಮಿ.ಮೀ ಮಳೆಯಾಗಿದ್ದು ಕೆಲವೆಡೆ ರಸ್ತೆಗಳು ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಳ್ಳಗಳು ಮೈದುಂಬಿ ಹರಿದಿವೆ. ಚಳ್ಳಕೆರೆ ಸುತ್ತಮುತ್ತ ಸುರಿದ ಭಾರೀ ಮಳೆಯಿಂದಾಗಿ ಚೆಕ್‌ಡ್ಯಾಂ ಭರ್ತಿಯಾಗಿ ಹರಿದ ನೀರು ಚಳ್ಳಕೆರೆ ಪಟ್ಟಣದ ರಹೀಂ ನಗರಕ್ಕೆ ಹರಿದು ಭಾರೀ ಅವಾಂತರ ಸೃಷ್ಟಿಯಾಗಿತ್ತು.

25 ಕ್ಕೂ ಹೆಚ್ಚು ಕೆರೆ ಕೋಡಿ
ತುಮಕೂರು ಅಮಾನಿಕೆರೆ ಸೇರಿದಂತೆ ಜಿಲ್ಲೆಯಲ್ಲಿ 25 ಕ್ಕೂ ಹೆಚ್ಚು ಕೆರೆ, ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ತುಮಕೂರಿನ ದೊಡ್ಡ ಕೆರೆ ಎಂದೇ ಪ್ರಸಿದ್ಧವಾಗಿರುವ ಅಮಾನಿಕೆರೆ ಕೋಡಿ ಬಿದ್ದಿದೆ. ಅಮಾನಿಕೆರೆ ಕೋಡಿ ಬಿದ್ದಿರುವುದರಿಂದ ಪಕ್ಕದಲ್ಲಿ ವಾಸವಾಗಿರುವ ಸುಮಾರು 24 ಕುಟುಂಬಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ದ.ಕ. ಸಹಿತ 15 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ
ಬೆಂಗಳೂರು: ದಕ್ಷಿಣ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಗುರುವಾರ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು ಎಲ್ಲೋ ಅಲರ್ಟ್‌ ಘೋಷಿಸಿ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕೊಟ್ಟಿದೆ. ದಕ್ಷಿಣ ಕನ್ನಡ, ಬೆಳಗಾವಿ, ಬೀದರ್‌, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಆಗಸ್ಟ್‌ 22ರಂದು ಎಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next