ರಾಯಚೂರು: ಕಳೆದ ತಿಂಗಳು ಬೀಸಿದ ಭಾರೀ ಬಿರುಗಾಳಿಗೆ ಸಾಕಷ್ಟು ಮನೆಗಳು ಜಖಂಗೊಂಡಿದ್ದು, ಏಪ್ರಿಲ್‌ನಲ್ಲಿ ಸುರಿದ ಆಲಿಕಲ್ಲು ಮಳೆಗೆ ಭತ್ತ, ಮಾವು ಬೆಳೆ ಹಾನಿಯಾಗಿದೆ. ಈ ಕುರಿತು ಜಿಲ್ಲಾಡಳಿತ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ವಿತರಿಸಲು ಸೂಚಿಸಿದ್ದಾಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರ ನಾಯಕ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೇ 24, 25ರಂದು ಬೀಸಿದ ಬಿರುಗಾಳಿಯಿಂದ ಮಾನ್ವಿ ತಾಲೂಕಿನ ಹರವಿ, ಗುಡದಿನ್ನಿ ಸೇರಿ ವಿವಿಧೆಡೆ ಮನೆಗಳು ಜಖಂಗೊಂಡರೆ, ಕೆಲವೆಡೆ ಟಿನ್ ಶೆಡ್‌ಗಳು ಹಾರಿ ಹೋಗಿವೆ. ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಈಗಾಗಲೇ 1,027 ಮನೆಗಳಿಗೆ ಪರಿಹಾರ ನೀಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರತಿ ಸಂತಸ್ತರಿಗೆ 4,100 ರೂ. ಪರಿಹಾರವನ್ನು ಆರ್‌ಟಿಜಿಎಸ್ ಮಾಡಲಾಗುವುದು. ಇನ್ನು ಏಪ್ರಿಲ್‌ನಲ್ಲಿ ಸುರಿದ ಆಲಿಕಲ್ಲು ಮಳೆಯಿಂದ ಸಿಂಧನೂರು ಸೇರಿ ಇತರೆ ಪ್ರದೇಶದಲ್ಲಿ, ಸುಮಾರು 2,277 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದ್ದು, 1.52 ಕೋಟಿ ರೂ. ನಷ್ಟವಾಗಿದೆ. ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ರೈತರಿಂದ ಖರೀದಿಸಿದ್ದ ತೊಗರಿ ಬಾಕಿ ಹಣವನ್ನು ಒಂದು ವಾರದಲ್ಲಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಇಲ್ಲಿವರೆಗೆ 21 ಸಾವಿರ ರೈತರಿಗೆ ಹಣ ನೀಡಿದ್ದು, ಇನ್ನೂ 744 ರೈತರಿಗೆ ಬಾಕಿಯಿದೆ. ದಾಖಲೆಗಳ ಪರಿಶೀಲನೆ, ಬ್ಯಾಂಕ್ ಖಾತೆ ಸಂಗ್ರಹದಲ್ಲಿನ ಸಮಸ್ಯೆಯಿಂದ ವಿಳಂಬವಾಗಿದ್ದು, ತಕ್ಷಣ ವಿತರಿಸಲಾಗುವುದು. ಉದ್ದೇಶಪೂರ್ವಕವಾಗಿ ಆದಂಥ ತಪ್ಪುಗಳಲ್ಲ. ಅಚಾತುರ್ಯದಿಂದಾಗಿದ್ದು, ಶೀಘ್ರದಲ್ಲೇ ಮಾಡಿಸಲಾಗುವುದು ಎಂದರು.
ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮ ರೀತಿಯಲ್ಲಿ ಸುರಿಯುತ್ತಿದ್ದು, ಈ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳಿಂದ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಲಾಗಿದ್ದು, ನಿತ್ಯ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಳೆದ ವರ್ಷ ಬೆಳೆ ವಿಮೆ ಮಾಡಿಸಿದ್ದ ರೈತರಿಗೆ ಹಣ ಬಂದಿಲ್ಲ ಎಂಬ ದೂರುಗಳಿವೆ. ಹೀಗಾಗಿ ಬೆಳೆ ವಿಮೆ ಮಾಡಿಸಲು ರೈತರು ಮುಂದೆ ಬರುತ್ತಿಲ್ಲ. ವಿಮೆ ಕಂಪನಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.