ಹಾವೇರಿ: ಜಿಲ್ಲೆ ಹಾಗೂ ಪಕ್ಕದ ಮಲೆನಾಡು ಜಿಲ್ಲೆಗಳಲ್ಲಿ ಮತ್ತೆ ಮಳೆ ಆರ್ಭಟ ಜೋರಾಗಿದ್ದರಿಂದ ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಪ್ರವಾಹದ ರೌದ್ರ ನರ್ತನದಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಮನೆಗಳು, ರಸ್ತೆ, ಶಾಲೆ, ದೇವಸ್ಥಾನ ಕುಸಿದು ಬಿದ್ದಿದ್ದವು. ಸಾವಿರಾರು ಮನೆಗಳು ಕುಸಿದು ಜನರು ಸಂಕಷ್ಟಕ್ಕೊಳಗಾಗಿದ್ದರು. ಬಳಿಕ ಎರಡು ವಾರ ಮಳೆ ಇಳಿಮುಖವಾಗಿ, ನದಿಗಳಲ್ಲಿ ಜಲರೌದ್ರತೆ ಕಡಿಮೆಯಾಗುತ್ತಿದ್ದಂತೆ ಜನರು ನೆಮ್ಮದಿಯ ನಿಟ್ಟುಬಿಟ್ಟಿದ್ದರು. ಮರು ಬದುಕು ಕಟ್ಟಿಕೊಳ್ಳುವ ಚಟುವಟಿಕೆಯತ್ತ ತೊಡಗಿದ್ದರು. ಮನೆ ಸ್ವಚ್ಛಗೊಳಿಸುವಿಕೆ, ಮನೆ ದುರಸ್ತಿ ಮಾಡಿಕೊಳ್ಳುವಿಕೆ, ನೀರಿಗೆ ನೆಂದ ಸರಕು ಸರಂಜಾಮು, ಆಹಾರ ಪದಾರ್ಥ ಒಣಗಿಸಿಕೊಳ್ಳುವ ಮುನ್ನವೇ ಮತ್ತೆ ಮಳೆ ಆರಂಭವಾಗಿದ್ದು ಜನರು ಕಂಗಾಲಾಗಿದ್ದಾರೆ.
ಮನೆ ಕುಸಿತ ಹೆಚ್ಚಳ: ತಿಂಗಳ ಹಿಂದೆ ಸೃಷ್ಟಿಯಾಗಿದ್ದ ನೆರೆಯಿಂದ ಭಾಗಶಃ ಕುಸಿದ ಮನೆಗಳು ಈಗ ಪೂರ್ಣ ಪ್ರಮಾಣದಲ್ಲಿ ಕುಸಿಯಲು ತುದಿಗಾಲಲ್ಲಿವೆ. ಮಳೆ ಹೀಗೆಯೇ ಮುಂದುವರಿದರೆ ಮನೆ, ಕಟ್ಟಡ ಕುಸಿತ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಮತ್ತೆ ಬೆಳೆಗಳು ಸಹ ಜಲಾವೃತವಾಗಲಿವೆ. ಇದರಿಂದ ರೈತರು, ಬಡವರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿವೆ.
ಕಳೆದ ತಿಂಗಳ ಸುರಿದ ಭಾರಿ ಮಳೆ ಹಾಗೂ ನದಿಗಳು ಉಕ್ಕಿದ್ದರಿಂದ ಉಂಟಾಗಿದ್ದ ನೆರೆಯಿಂದ ಜಿಲ್ಲೆಯಲ್ಲಿ 22 ಗ್ರಾಮಗಳು ಜಲಾವೃತವಾಗಿದ್ದವು. ಓರ್ವ ವ್ಯಕ್ತಿ ಹಾಗೂ 135 ಜಾನುವಾರುಗಳ ಜೀವಹಾನಿಯಾಗಿತ್ತು. 15387 ಮನೆಗಳು ಹಾನಿಯಾಗಿದ್ದವು. 4489 ಕುಟುಂಬಗಳು ನಿರಾಶ್ರಿತವಾಗಿದ್ದವು. 159 ಪರಿಹಾರ ಕೇಂದ್ರಗಳಲ್ಲಿ 17415 ಕುಟುಂಬಗಳು ಆಶ್ರಯ ಪಡೆದಿದ್ದವು. 58 ಕುಟುಂಬಗಳಿಗೆ ಶೆಡ್ ನಿರ್ಮಿಸಿಕೊಡಲಾಗಿತ್ತು. 1,23,065 ಹೆಕ್ಟೇರ್ ಕೃಷಿ ಬೆಳೆ ಹಾಗೂ 13649 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯ ಫಲವತ್ತಾದ ಮಣ್ಣು ನಾಶವಾಗಿದೆ. 1444 ಶಾಲಾ ಕಟ್ಟಡಗಳು, ರಸ್ತೆ, ಸೇತುವೆ ಸೇರಿದಂತೆ 39285ಲಕ್ಷ ರೂ.ಗಳ ಮೂಲಸೌಕರ್ಯ ಹಾಳಾಗಿತ್ತು. ಈಗ ಮತ್ತೆ ಮಳೆ ನಿರಂತರವಾಗಿ ಸುರಿದರೆ ಜನರ ಬದುಕು ನೀರಲ್ಲಿ ಮುಳುಗುವ ಭೀತಿ ಎದುರಾಗಿದೆ.
Advertisement
ಕಳೆದ ಒಂದು ತಿಂಗಳ ಹಿಂದಷ್ಟೇ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿದಿರುವ ವರದಾ, ಕುಮದ್ವತಿ, ಧರ್ಮಾ, ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿ ನೆರೆ ಸೃಷ್ಟಿಯಾಗಿತ್ತು. ಈಗ ಮತ್ತೆ ಈ ಮಲೆನಾಡು ಜಿಲ್ಲೆಯಲ್ಲಿ ಮಳೆ ಆರ್ಭಟ ಶುರುವಾಗಿದ್ದು ಜಿಲ್ಲೆಯ ನದಿಪಾತ್ರದ ಜನರಲ್ಲಿ ಭಯ ಹುಟ್ಟಿಸಿದೆ.
Related Articles
Advertisement
ಮತ್ತೆ ಆತಂಕ: ನದಿ ಪಾತ್ರದ ಹಾನಗಲ್ಲ ತಾಲೂಕಿನ ಅಲ್ಲಾಪುರ, ಹರವಿ, ಕೂಡಲ, ಹರನಗಿರಿ, ಬಸಾಪುರ, ಹಾವೇರಿ ತಾಲೂಕಿನ ಗುಯಿಲಗುಂದಿ, ಮೇಲ್ಮುರಿ, ಸವಣೂರು ತಾಲೂಕಿನ ಹಳೆಹಲಸೂರ, ಕುಣಿಮೆಳ್ಳಳ್ಳಿ, ಮನ್ನಂಗಿ, ಮೆಳ್ಳಾಗಟ್ಟಿ, ಬರಗೂರ, ಫಕ್ಕೀರನಂದಿಹಳ್ಳಿ, ನದಿನೀರಲಗಿ, ಕಳಸೂರ, ಕುರುಬರಮಲ್ಲೂರ, ಕಲಕೋಟಿ, ಚಿಕ್ಕಮಗದೂರ, ಹಿರೇಮಗದೂರ, ಹರಳಳ್ಳಿ, ಶಿಗ್ಗಾವಿ ತಾಲೂಕಿನ ಚಿಕ್ಕನೆಲ್ಲೂರ, ಮಡ್ಲಿ ಗ್ರಾಮಗಳ ಜನರು ತಿಂಗಳ ಹಿಂದಿನ ನೆರೆ ಹಾವಳಿಯಿಂದ ಚೇತರಿಸಿಕೊಳ್ಳುವ ಮೊದಲೇ ಮತ್ತೆ ಶುರುವಾದ ಮಳೆಯಿಂದ ಆತಂಕಗೊಂಡಿದ್ದಾರೆ.
ಮತ್ತೆ ಬೆಳೆ ಜಲಾವೃತ: ತಿಂಗಳ ಹಿಂದಷ್ಟೇ ನೆರೆಯ ನೀರು ನುಗ್ಗಿ ಜಲಾವೃತವಾಗಿದ್ದ ಸಾವಿರಾರು ಹೆಕ್ಟೇರ್ ಕೃಷಿ, ತೋಟಗಾರಿಕೆ ಪ್ರದೇಶದ ಬೆಳೆಗಳಿಗೆ ಮತ್ತೆ ಜಲಕಂಟಕ ಎದುರಿಸುವ ಭೀತಿ ಎದುರಾಗಿದೆ. ಎರಡು ವಾರ ಮಳೆ ಇಳಿಮುಖವಾದಾಗ ರೈತರು ಜಮೀನಿನಲ್ಲಿ ನಿಂತ ನೀರನ್ನು ಹೊರಹಾಕುವ ಸಾಹಸ ಮಾಡಿದ್ದರು. ಅಳಿದುಳಿದ ಬೆಳೆ ರಕ್ಷಿಸಲು ಕೆಲವರು ಕ್ರಮ ಕೈಗೊಂಡರೆ, ಮತ್ತೆ ಕೆಲ ರೈತರು ಹೊಸದಾಗಿ ಬಿತ್ತನೆ ಮಾಡಲು ಅಣಿಯಾಗಿದ್ದರು. ಈ ಮತ್ತೆ ಮಳೆ ಶುರುವಾಗಿದ್ದರಿಂದ ರೈತರ ಶ್ರಮ ಮತ್ತೆ ನೀರುಪಾಲಾಗುವ ಭಯ ಶುರುವಾಗಿದೆ.
ಕಳೆದ ಮೂರು ವರ್ಷಗಳಿಂದ ಮಳೆ ಇಲ್ಲದೇ ಬರದಲ್ಲಿ ಬೆಂದ ರೈತರು, ಈ ವರ್ಷ ನೆರೆ, ಅತಿವೃಷ್ಟಿಗೆ ಸಿಲುಕಿ, ಅವರ ಬದುಕು ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಹಿಂದೆ ಹಾಕಿದ ರಸಗೊಬ್ಬರ ಬೆಳೆ ಸಹಿತ ಕೊಚ್ಚಿಕೊಂಡು ಹೋಗಿದ್ದು ಈಗ ಹೊಸದಾಗಿ ಮತ್ತೆ ಈಗ ರಸಗೊಬ್ಬರ ಹಾಕುವ ಹಂತದಲ್ಲಿರುವಾಗಲೇ ಮಳೆ ಬರುತ್ತಿದ್ದು ರೈತ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೊನ್ನೆಯಷ್ಟೇ ಮನಿ ಕಳಕೊಂಡೇವಿ. ಇನ್ನು ಸಾಲಸೂಲ ಮಾಡಿ ಬಿತ್ತಗಿ ಮಾಡಿದ್ದು ನೀರಾಗ ಹೋಗೈತಿ. ಹಿಂದಿನ ವಾರ ಮಳಿ ಕಡಿಮೆ ಆಗೈತಿ ಅಂತ ಮತ್ತ ಗೊಬ್ಬರ ಹಾಕಿದ್ವಿ. ಈಗ ಮತ್ತ ಮಳಿ ಹಿಡದೈತಿ. ಮಳಿ ಹಿಂಗ ಕಾಡಿದ್ರ ಜನ ಹೆಂಗ ಬದಕ್ತಾರ? ನಮ್ ಜೀವನಾ ಬಹಳ ಕಷ್ಟದಾಗೈತ್ರಿ. ಮಂತ್ರಿ, ಅಧಿಕಾರಿಗಳು ಪರಿಹಾರ ಕೊಡ್ತೇನಿ ಹೇಳ್ಯಾರ. ಆದ್ರ ಅದು ಯಾವಾಗ ನಮ್ ಕೈಗೆ ಸಿಗತೈತೋ ದೇವರೇ ಬಲ್ಲ.
ನಮ್ ಜೀವನಾ ಬಹಳ ಕಷ್ಟದಾಗೈತ್ರಿ..
ಮೊನ್ನೆಯಷ್ಟೇ ಮನಿ ಕಳಕೊಂಡೇವಿ. ಇನ್ನು ಸಾಲಸೂಲ ಮಾಡಿ ಬಿತ್ತಗಿ ಮಾಡಿದ್ದು ನೀರಾಗ ಹೋಗೈತಿ. ಹಿಂದಿನ ವಾರ ಮಳಿ ಕಡಿಮೆ ಆಗೈತಿ ಅಂತ ಮತ್ತ ಗೊಬ್ಬರ ಹಾಕಿದ್ವಿ. ಈಗ ಮತ್ತ ಮಳಿ ಹಿಡದೈತಿ. ಮಳಿ ಹಿಂಗ ಕಾಡಿದ್ರ ಜನ ಹೆಂಗ ಬದಕ್ತಾರ? ನಮ್ ಜೀವನಾ ಬಹಳ ಕಷ್ಟದಾಗೈತ್ರಿ. ಮಂತ್ರಿ, ಅಧಿಕಾರಿಗಳು ಪರಿಹಾರ ಕೊಡ್ತೇನಿ ಹೇಳ್ಯಾರ. ಆದ್ರ ಅದು ಯಾವಾಗ ನಮ್ ಕೈಗೆ ಸಿಗತೈತೋ ದೇವರೇ ಬಲ್ಲ.ಫಕ್ಕೀರಪ್ಪ ಮೇಲ್ಮುರಿ, ರೈತ
•ಎಚ್.ಕೆ. ನಟರಾಜ