Advertisement

2021ರಲ್ಲಿ ರೈಲಲ್ಲಿ ಎಲ್ಲರಿಗೂ ಸೀಟು

02:00 AM Apr 29, 2017 | Karthik A |

ಹೊಸದಿಲ್ಲಿ: ದೂರದ‌ ಊರುಗಳಿಗೆ ರೈಲಿನಲ್ಲಿ ಹೋಗುವಾಗ ಬರ್ತ್‌ ಸಿಗುತ್ತಿಲ್ಲ ಎಂಬ ಗೊಣಗಾಟ ಎಲ್ಲರಿಗೂ ಇದ್ದದ್ದೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಆ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ರೈಲ್ವೇ ಇಲಾಖೆ ಭರವಸೆ ಕೊಟ್ಟಿದೆ. ದೂರದ ಊರುಗಳಿಗೆ ಹೋಗುವ ಎಲ್ಲ ಪ್ರಯಾಣಿಕರಿಗೆ 2021ರ ವೇಳೆಗೆ ಬರ್ತ್‌ ಕೊಡಲು ರೈಲ್ವೇ ಇಲಾಖೆ ಮುಂದಾಗಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಭಾರೀ ಅಂತರದ ಹಿನ್ನೆಲೆಯಲ್ಲಿ ಈಗ ಎಲ್ಲರಿಗೂ ಕಡ್ಡಾಯವಾಗಿ ಬರ್ತ್‌ ಕೊಡಲು ಸಾಧ್ಯವಾಗುತ್ತಿಲ್ಲ. ಬಹಳಷ್ಟು ಮಂದಿ ಟಿಕೆಟ್‌ ಕಾಯ್ದಿರಿಸುತ್ತಾರೆ. ಹಲವರು ವೇಯ್ಟಿಂಗ್‌ ಲಿಸ್ಟ್‌ನಲ್ಲಿರುತ್ತಾರೆ. ಸೀಟು ಖಚಿತವಾಗದಿದ್ದರೆ, ಅವರಿಗೆ ಪ್ರಯಾಣ ಬೆಳೆಸಲು ಆಗುವುದಿಲ್ಲ. ಇಂತಹ ಸಮಸ್ಯೆ ಹಲವಾರು ವರ್ಷಗಳಿಂದಲೂ ಇದೆ. 

Advertisement

ಇದಕ್ಕೆ ಮಂಗಳ ಹಾಡಲು ಚಿಂತನೆ ನಡೆಸಿರುವ ಇಲಾಖೆ, ಹೆಚ್ಚು ಪ್ರಯಾಣಿಕರು ಓಡಾಡುವ ಮಾರ್ಗಗಳಲ್ಲಿ ಹೆಚ್ಚು ಹೆಚ್ಚು ಪ್ರಯಾಣಿಕರ ರೈಲನ್ನು ಓಡಿಸಲು ಮುಂದಾಗಿದೆ ಎಂದು ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆೆ. ದಿಲ್ಲಿ ಹೌರಾ, ದಿಲ್ಲಿ -ಮುಂಬಯಿ ನಡುವೆ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ಜತೆಗೆ ಮೂಲ ಸೌಲಭ್ಯ ಕಲ್ಪಿಸಿ ವೇಗದ ರೈಲುಗಳನ್ನು ಓಡಿಸುವುದಾಗಿಯೂ ಸಚಿವರು ಹೇಳಿದ್ದಾರೆ. ರೈಲುಗಳ ವೇಗಕ್ಕೆ ತಕ್ಕಂತೆ ಹಳಿಗಳನ್ನು ಪರಿವರ್ತನೆ ಮಾಡುವ ಕೆಲಸಕ್ಕೂ ಚಾಲನೆ ನೀಡಲಾಗಿದ್ದು, 20 ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ. ಸಿಗ್ನಲ್‌, ಮಾರ್ಗಗಳ ಅಭಿವೃದ್ಧಿ ಮತ್ತು ಗೂಡ್ಸ್‌ ರೈಲುಗಳಿಗೆ ಪ್ರತ್ಯೇಕ ಮಾರ್ಗ ನಿರ್ಮಾಣ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ. ಕಳೆದ 2 ವರ್ಷಗಳಲ್ಲಿ 16,500 ಮಾರ್ಗ ಅಭಿವೃದ್ಧಿಪಡಿಸಿ, ರಾಷ್ಟ್ರೀಯ ರೈಲು ಜಾಲಕ್ಕೆ ಸೇರ್ಪಡೆ ಮಾಡಲಾಗಿದೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next