ಹೊಸದಿಲ್ಲಿ: ಭಾರತೀಯ ರೈಲುಮಾರ್ಗಗಳಲ್ಲಿ ಚಲಿಸುವ ಪ್ರಯಾಣಿಕ ರೈಲುಗಳ ವೇಗ ಸದ್ಯದಲ್ಲೇ ತೀವ್ರಗೊಳ್ಳಲಿದೆ. ಕೇಂದ್ರ ರೈಲ್ವೇ ಸಚಿವ ಪೀಯೂಷ್ ಗೋಯಲ್ ನೇತೃತ್ವದಲ್ಲಿ ಈ ಕೆಲಸ ವೇಗ ಪಡೆದುಕೊಂಡಿದೆ.
ಗೋಲ್ಡನ್ ಕ್ವಾಡ್ರಿಲ್ಯಾಟರಲ್ ವ್ಯಾಪ್ತಿಯಲ್ಲಿ ಬರುವ ದಿಲ್ಲಿ, ಮುಂಬಯಿ, ಚೆನ್ನೈ, ಹೌರಾವನ್ನು ಬೆಸೆಯುವ ಪ್ರಯಾಣಿಕ ರೈಲುಗಳ ವೇಗ ಗಂಟೆಗೆ 130 ಕಿ.ಮೀ. ಆಗಿ ಬದಲಾಗಲಿದೆ.
ಈ ವಿತ್ತೀಯ ವರ್ಷದ ಅಂತ್ಯಕ್ಕೆ ಇದನ್ನು ಸಾಧಿಸುವ ಗುರಿ ಹೊಂದಿದ್ದೇವೆಂದು ರೈಲ್ವೇ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ಮಾಹಿತಿ ನೀಡಿದ್ದಾರೆ.
180 ಕಿ.ಮೀ. ವೇಗದ ಗುರಿ: ಇಷ್ಟು ಮಾತ್ರವಲ್ಲ ದೆಹಲಿ-ಮುಂಬಯಿ, ದಿಲ್ಲಿ-ಹೌರಾ ಮಾರ್ಗದಲ್ಲಿ 160 ಕಿ.ಮೀ. ವೇಗದಲ್ಲಿ ರೈಲು ಸಂಚಾರ ಸಾಧ್ಯವಾಗುವಂತೆ ಮಾಡಲು 13,000 ಕೋಟಿ ರೂ. ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
2023ರಲ್ಲಿ ಇದು ಮುಗಿಯುವ ನಿರೀಕ್ಷೆಯಿದೆ. ಇದೇ ವೇಳೆ ವಂದೇ ಭಾರತ್ ಯೋಜನೆಯಡಿ 180 ಕಿ.ಮೀ. ವೇಗದಲ್ಲಿ ಸಂಚರಿಸುವ ರೈಲುಗಳ ತಯಾರಿಯೂ ನಡೆಯುತ್ತಿದೆ.