Advertisement

ಕರ್ನಾಟಕ ಬೌಲಿಂಗ್‌ ದಾಳಿಗೆ ರೈಲ್ವೇಸ್‌ ಕುಸಿತ

06:40 AM Dec 24, 2018 | |

ಶಿವಮೊಗ್ಗ: ರೈಲ್ವೇಸ್‌ ವಿರುದ್ಧ ಬ್ಯಾಟಿಂಗ್‌ ಕುಸಿತ ಅನುಭವಿಸಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 214 ರನ್‌ಗೆ ಆಲೌಟಾದ ಕರ್ನಾಟಕ ಭರ್ಜರಿ ತಿರುಗೇಟು ನೀಡಿದೆ. ರೈಲ್ವೇಸ್‌ ತಂಡವನ್ನು ಕೇವಲ 143 ರನ್‌ಗೆ ಹಿಡಿದು ನಿಲ್ಲಿಸಿದೆ. ಮಾತ್ರವಲ್ಲ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 41 ರನ್‌ ಮಾಡಿ ಒಟ್ಟು ಮುನ್ನಡೆಯನ್ನು 112 ರನ್ನುಗಳಿಗೆ ವಿಸ್ತರಿಸಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಕರ್ನಾಟಕ ಮುನ್ನೂರರ ತನಕ ಸಾಗಿದರೆ ಗೆಲುವು ಅಸಾಧ್ಯವಲ್ಲ.

Advertisement

ಪಂದ್ಯದ ಮೊದಲನೇ ದಿನವಾದ ಶನಿವಾರ ಕರ್ನಾಟಕ ತೀವ್ರ ಕುಸಿತ ಅನುಭವಿಸಿ 208 ರನ್ನಿಗೆ 9 ವಿಕೆಟ್‌ ಕಳೆದುಕೊಂಡಿತ್ತು. ರವಿವಾರ ಬೆಳಗ್ಗೆ ಬೇಗನೇ ಅಂತಿಮ ವಿಕೆಟ್‌ ಕಳೆದುಕೊಂಡು 214ಕ್ಕೆ ಆಲೌಟಾಯಿತು. ಇನ್ನಿಂಗ್ಸ್‌ ಆರಂಭಿಸಿದ ರೈಲ್ವೇಸ್‌ ಕೂಡ ಪಟಪಟನೆ ವಿಕೆಟ್‌ ಕಳೆದುಕೊಂಡಿತು. ಕರ್ನಾಟಕಕ್ಕಿಂತ ದಯನೀಯ ಮೊತ್ತಕ್ಕೆ ಆಲೌಟಾಯಿತು.

ರೋನಿತ್‌ಗೆ 5 ವಿಕೆಟ್‌
ಕರ್ನಾಟಕದ ಪಾಲಿಗೆ ಭರವಸೆಯಾದವರು ಮಧ್ಯಮ ವೇಗದ ಬೌಲರ್‌ ರೋನಿತ್‌ ಮೋರೆ. ಅಮೋಘ ಬೌಲಿಂಗ್‌ ನಡೆಸಿದ ಅವರು ಕೇವಲ 45 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ರೈಲ್ವೇಸ್‌ ನಾಯಕ ಅರಿಂದಮ್‌ ಘೋಷ್‌ ವಿಕೆಟ್‌ ಕೀಳುವ ಮೂಲಕ ರೋನಿತ್‌ ದಾಳಿ ತೀವ್ರವಾಯಿತು. ಸಾಹಿಮ್‌ ಹಸನ್‌, ಹರ್ಷ ತ್ಯಾಗಿ, ಅಮಿತ್‌ ಮಿಶ್ರಾ, ಕರಣ್‌ ಠಾಕೂರ್‌ ಅವರನ್ನು ಮೋರೆ ಪೆವಿಲಿಯನ್‌ಗೆ ರವಾನಿಸಿದರು.

ವೇಗಿ ಅಭಿಮನ್ಯು ಮಿಥುನ್‌ ಆರಂಭಕಾರ ಸೌರಭ್‌ ವಕಾಸ್ಕರ್‌ ಹಾಗೂ ದ್ವಿತೀಯ ಕ್ರಮಾಂಕದ ಬ್ಯಾಟ್ಸ್‌ಮನ್‌ ನಿತಿನ್‌ ಭಿಲ್ಲೆಯನ್ನು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ಗೆ ಕಳುಹಿಸಿದರು. ಇದರಿಂದ ರಾಜ್ಯಕ್ಕೆ ಬಲವಾದ ಹಿಡಿತ ಸಿಕ್ಕಿತು. ಪ್ರಸಿದ್ಧ್ ಕೃಷ್ಣ ಕೂಡ ವಿಕೆಟ್‌ ಕಬಳಿಸಿದರು. ಬಳಿಕ ರೋನಿತ್‌ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಂಡರು.

ಗೆದ್ದರಷ್ಟೇ ನಾಕೌಟ್‌ ಸಾಧ್ಯತೆ
ಪ್ರಸ್ತುತ ಋತುವಿನಲ್ಲಿ ಕರ್ನಾಟಕ 6ನೇ ರಣಜಿ ಪಂದ್ಯವಾಡುತ್ತಿದೆ. ನಾಕೌಟ್‌ ಹಂತಕ್ಕೇರಲು ಈ ಪಂದ್ಯವನ್ನು ಜಯಿಸುವುದು ಕರ್ನಾಟಕಕ್ಕೆ ಅನಿವಾರ್ಯವಾಗಿದೆ.ಈ ಬಾರಿ ರಣಜಿ ತಂಡಗಳ ಸಂಖ್ಯೆ 37ಕ್ಕೆ ಏರಿರುವುದರಿಂದ ಕ್ವಾರ್ಟರ್‌ ಫೈನಲ್‌ನ 8 ಸ್ಥಾನಗಳಿಗಾಗಿ ತೀವ್ರ ಪೈಪೋಟಿಯಿದೆ. ಎ ಮತ್ತು ಬಿ ಗುಂಪಿನಿಂದ ಒಟ್ಟು 5 ತಂಡಗಳು ಮುಂದಿನ ಸುತ್ತಿಗೇರಲಿವೆ. ಸಿ ಗುಂಪಿನಿಂದ 2 ತಂಡ, ಪ್ಲೇಟ್‌ ಗುಂಪಿನಿಂದ ಒಂದು ತಂಡ ಮುಂದಿನ ಹಂತಕ್ಕೇರಲಿವೆ.

Advertisement

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-214 ಮತ್ತು ವಿಕೆಟ್‌ ನಷ್ಟವಿಲ್ಲದೆ 41 (ನಿಶ್ಚಲ್‌ ಬ್ಯಾಟಿಂಗ್‌ 25, ಪಡಿಕ್ಕಲ್‌ ಬ್ಯಾಟಿಂಗ್‌ 11). ರೈಲ್ವೇಸ್‌-143 (ಎಂ.ಎನ್‌. ರಾವ್‌ 52, ಪಿ.ಎಸ್‌.ಕೆ. ಗುಪ್ತಾ 35, ಅಮಿತ್‌ ಮಿಶ್ರಾ 18, ಮೋರೆ 45ಕ್ಕೆ 5, ಮಿಥುನ್‌ 22ಕ್ಕೆ 2, ಪ್ರಸಿದ್ಧ್ ಕೃಷ್ಣ 26ಕ್ಕೆ 2, ಕೆ. ಗೌತಮ್‌ 23ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next