ಅಹಮ್ಮದಾಬಾದ್:ಪ್ರಬಲ ಶಕ್ತಿಯೊಂದಿಗೆ ಗುಜರಾತ್ ಕರಾವಳಿಗೆ ವಾಯು ಚಂಡಮಾರುತ ಅಪ್ಪಳಿಸಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಪ್ರಯಾಣಿಕರ ರಕ್ಷಣೆ ಮತ್ತು ಸುರಕ್ಷತೆಯ ನಿಟ್ಟಿನಲ್ಲಿ ಗುಜರಾತ್ ರೈಲ್ವೆ ಇಲಾಖೆ ಈಗಾಗಲೇ 110ಕ್ಕೂ ಅಧಿಕ ರೈಲುಗಳ ಸಂಚಾರವನ್ನು ರದ್ದುಪಡಿಸಿದೆ ಎಂದು ವರದಿ ತಿಳಿಸಿದೆ.
ಗುಜರಾತ್ ರೈಲ್ವೆ ಇಲಾಖೆ ಇಂದು ಬೆಳಗ್ಗೆ 70 ಹಾಗೂ ಮಧ್ಯಾಹ್ನ 28 ರೈಲುಗಳ ಸಂಚಾರವನ್ನು ರದ್ದುಪಡಿಸಿರುವುದಾಗಿ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಗುಜರಾತ್ ನ ವೆರಾವಾಲ್, ಓಖಾ, ಫೋರಬಂದರ್, ಭಾವ್ ನಗರ್, ಭುಜ್ ಮತ್ತು ಗಾಂಧಿಧಾಮ್ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಹೇಳಿದೆ.
ಗುಜರಾತ್ ಸಹಿತ ದೇಶದ ಪಶ್ಚಿಮ ಕರಾವಳಿಯ ಉದ್ದಕ್ಕೂ ಭಾರೀ ಮಳೆ, ಮತ್ತು ಗಂಟೆಗೆ 155 ರಿಂದ 165 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಟ್ಟೆಚ್ಚರ ವಹಿಸಲಾಗಿದೆ.
ರಕ್ಷಣಾ ತಂಡಗಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸಲಾಗಿದೆ. ಹೆಲ್ಪ್ ಲೈನ್‌ಗಳನ್ನು ಸಜ್ಜುಗೊಳಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ, ನೌಕಾ ಪಡೆ, ಭೂ ಸೇನೆ ಮತ್ತು ವಾಯು ಪಡೆಯನ್ನು ಕೂಡ ಯಾವುದೇ ಕ್ಷಣದಲ್ಲಿ ರಕ್ಷಣಾ ಕಾರ್ಯಕ್ಕೆ ನೆರವಾಗುವುದಕ್ಕಾಗಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಾಯು ಚಂಡಮಾರುತ ತನ್ನ ಪಥವನ್ನು ಬದಲಿಸಿರುವ ಹೊರತಾಗಿಯೂ ಸೌರಾಷ್ಟ್ರ ಕರಾವಳಿಯಾಗಿ ಸಾಗುತ್ತಿರುವುದರಿಂದ ಅಮ್ರೇಲಿ, ಗಿರ್, ಸೋಮನಾಥ್, ದೀವ್, ಜುನಾಗಢ, ದೇವಭೂಮಿ, ದ್ವಾರಕಾ ಮತ್ತು ಕಚ್ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದ್ದು ಇವು ತೀವ್ರವಾಗಿ ಬಾಧಿತವಾಗಿವೆ.
ನಿನ್ನೆ ಬುಧವಾರ ಗುಜರಾತ್ ಮತ್ತು ದೀವ್ ನ ತಗ್ಗು ಪ್ರದೇಶಗಳ ಸುಮಾರು 3.1 ಲಕ್ಷ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು.