Advertisement

ಕಡಬ:ಬೊಟ್ಟಡ್ಕದಲ್ಲಿ ಆಗಬೇಕಿದೆ ರೈಲ್ವೇ ಅಂಡರ್‌ಪಾಸ್‌

09:26 AM May 17, 2022 | Team Udayavani |

ಕಡಬ: ಮಂಗಳೂರು- ಬೆಂಗಳೂರು ರೈಲು ಮಾರ್ಗ ಹಾದು ಹೋಗುತ್ತಿರುವ ಕೊಂಬಾರು ಗ್ರಾಮದ ಬೊಟ್ಟಡ್ಕ (93-94 ಕಿ.ಮೀ. ಮಧ್ಯೆ 200 ಮೀ. ನಲ್ಲಿ) ದಲ್ಲಿ ಮಕ್ಕಳು, ಕೃಷಿಕರು ಸೇರಿದಂತೆ ಪರಿಸರದ ಜನರು ಸಂಚರಿಸಲು ರೈಲ್ವೇ ಅಂಡರ್‌ಪಾಸ್‌ ನಿರ್ಮಿಸಬೇಕೆನ್ನುವ ಹಲವು ವರ್ಷಗಳ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.

Advertisement

ಗ್ರಾಮದ ಬೊಟ್ಟಡ್ಕ ಮತ್ತು ಕಲ್ಲರ್ತನೆ ಪ್ರದೇಶದ ನಡುವೆ ರೈಲು ಮಾರ್ಗ ಹಾದುಹೋಗುತ್ತಿದೆ. ಹತ್ತಿರದಲ್ಲಿಯೇ ಮೊಗೇರಡ್ಕ ಸರಕಾರಿ ಹಿ.ಪ್ರಾ.ಶಾಲೆಯೂ ಇದೆ. ಆ ಶಾಲೆಗೆ ಬರುವ ಪುಟಾಣಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ಸೇರಿದಂತೆ ಸ್ಥಳೀಯ ಜನರು ಅನಿವಾರ್ಯವಾಗಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ರೈಲು ಹಳಿಯನ್ನು ದಾಟಿ ತಮ್ಮ ಕೆಲಸಗಳಿಗೆ ತೆರಳಬೇಕಿದೆ.

ಶಾಲೆಗೆ ಹೋಗುವ ಪುಟಾಣಿ ಮಕ್ಕಳನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಮನೆಯವರು ಹಳಿ ದಾಟಿಸಿ ಬಿಡಬೇಕಾದ ಅನಿವಾರ್ಯ ಇಲ್ಲಿದೆ. ಕಲ್ಲಾಯ, ಕಲ್ಲರ್ತನೆ, ಬೊಟ್ಟಡ್ಕ, ಉರುಂಬಿ, ಮುಗೇರು ಮುಂತಾದ ಪ್ರದೇಶದ ಜನರಿಗೆ ಇಲ್ಲಿ ಅಂಡರ್‌ ಪಾಸ್‌ ನಿರ್ಮಾಣವಾದರೆ ಅನುಕೂಲವಾಗಲಿದೆ.

ಕಲ್ಲಾಯ ಮತ್ತು ಕಲ್ಲರ್ತನೆ ಪ್ರದೇಶದ ಜನರಿಗಂತೂ ರಸ್ತೆಯೇ ಇಲ್ಲ. ಬೇಸಗೆಯಲ್ಲಿ ಹೊಳೆಯಲ್ಲಿ ನೀರು ಕಡಿಮೆಯಾದಾಗ ಮಾತ್ರ ಹೊಳೆ ದಾಟಿ ಸುತ್ತು ಬಳಸಿ ಸಂಚರಿಸಬಹುದು. ಮಳೆಗಾಲದಲ್ಲಿ ಹಳಿ ದಾಟಿ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕು. ಕೃಷಿ ಉತ್ಪನ್ನಗಳು, ಗೊಬ್ಬರ ಸೇರಿದಂತೆ ಯಾವುದೇ ಸಾಮಗ್ರಿಗಳನ್ನು ಸಾಗಿಸಬೇಕಿದ್ದರೂ ತಲೆಹೊರೆಯಲ್ಲಿಯೇ ಸಾಗಿಸಬೇಕಾದ ದುರ್ದೈವ ಇಲ್ಲಿನ ಜನರದ್ದು. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಜನರ ಬವಣೆಯನ್ನು ನೀಗಿಸಬೇಕೆನ್ನುವುದು ಸ್ಥಳೀಯರ ಆಗ್ರಹ.

ಹಲವು ವರ್ಷಗಳ ಬೇಡಿಕೆ

Advertisement

ಹಲವು ವರ್ಷಗಳ ಹಿಂದೆ ಮಂಗಳೂರು- ಬೆಂಗಳೂರು ರೈಲು ಮಾರ್ಗ ವನ್ನು ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ಗೆ ಪರಿವರ್ತಿಸುವ ಸಂದರ್ಭದಲ್ಲಿಯೂ ಸ್ಥಳೀಯರು ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಗ್ರಾಮಸಭೆಗಳಲ್ಲಿಯೂ ನಿರ್ಣಯಗಳನ್ನು ಕೈಗೊಂಡು ಸಂಬಂಧ ಪಟ್ಟವರಿಗೆ ರವಾನಿಸಲಾಗಿತ್ತು. ಆದರೆ ಜನರ ಬೇಡಿಕೆಗಳಿಗೆ ಯಾವುದೇ ಮನ್ನಣೆ ದೊರೆತಿಲ್ಲ.

ಸಚಿವರು, ಸಂಸದರ ಜತೆ ಚರ್ಚೆ

ಬೊಟ್ಟಡ್ಕದಲ್ಲಿ ರೈಲ್ವೇ ಅಂಡರ್‌ಪಾಸ್‌ ನಿರ್ಮಿಸಿದರೆ ಜನರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸಂಸದರು ಹಾಗೂ ಸಚಿವರ ಜತೆ ಮಾತುಕತೆ ನಡೆಸಿ ನಮ್ಮ ಸಲಹಾ ಸಮಿತಿ ಸಭೆಯಲ್ಲಿ ರೈಲ್ವೇ ಇಲಾಖೆಯ ಉನ್ನತಾಧಿಕಾರಿಗಳ ಗಮನ ಸೆಳೆಯಲಾಗುವುದು. -ವೆಂಕಟ್‌ ದಂಬೆಕೋಡಿ, ಸದಸ್ಯರು, ರೈಲ್ವೇ ಸಲಹ ಸಮಿತಿ.

-ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next