ಹುಣಸೂರು: ರಾಜ್ಯಾದ್ಯಂತ ಉದ್ಯಾನವನದಂಚಿನ ಗ್ರಾಮಗಳಲ್ಲಿ ವನ್ಯಜೀವಿ ಮತ್ತು ಮಾನವ ಸಂಘರ್ಷ ತಪ್ಪಿಸುವ ಸಲುವಾಗಿ ಈ ಬಾರಿಯ ಬಜೆಟ್‌ನಲ್ಲಿ 250 ಕೋಟಿ ರೂ. ಮೀಸಲಿಟ್ಟಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಭಾಗದಿಂದಲೇ ರೈಲ್ವೆ ಕಂಬಿಯ ತಡೆಗೋಡೆ ನಿರ್ಮಾಣದ ಕಾಮಗಾರಿಯನ್ನು ಆರಂಭಿಸಲಾಗುವುದೆಂದು ಜೆಡಿಎಸ್.ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ತಿಳಿಸಿದರು.
ತಾಲೂಕಿನ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಕಚುವಿನಹಳ್ಳಿಯಲ್ಲಿ ಹನಗೋಡು-ಕಚುವಿನಹಳ್ಳಿ ಮುಖ್ಯ ರಸ್ತೆಗೆ 2 ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಲ್ಪ ಕಾಲವಧಿಯಲ್ಲೇ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮ್ಮಿಶ್ರ ಸರಕಾರದಿಂದ ನೂರಾರು ಕೋಟಿ ರೂ. ಮಂಜೂರು ಮಾಡಿಸಿ, ತಾಲೂಕಿನ ಪ್ರಗತಿಗೆ ಶ್ರಮಿಸುತ್ತಿದ್ದೇನೆಂದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಲೋಕೋಪಯೋಗಿ ಇಲಾಖೆವತಿಯಿಂದ ರಸ್ತೆ, ಚರಂಡಿ ನಿರ್ಮಾಣ ಹಾಗೂ ನೀರಾವರಿ ಇಲಾಖೆಯಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಮಂಜೂರಾಗಿದೆ. 41 ಗ್ರಾಮ ಪಂಚಾಯ್ತಿಗಳಿಗೆ ತಲಾ 20 ಮನೆಗಳು ಸಾಮಾನ್ಯ ವರ್ಗಕ್ಕೆ ಮಂಜೂರು ಮಾಡಿಸಲಾಗಿದೆ. ಕಡ್ಡಾಯವಾಗಿ ಗ್ರಾಮಸಭೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು.
ಉದ್ಯೋಗ ಖಾತರಿ ಯೋಜನೆಯಡಿ 27 ತರಹದ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಕೆ.ಡಿ.ಮಹೇಶ ಮಾತನಾಡಿ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಕ್ರಮವಹಿಸಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಟ್ಟನಾಯಕ, ತಾಪಂ ಅಧ್ಯಕ್ಷೆ ಪದ್ಮಮ್ಮ, ತಾಪಂ ಸದಸ್ಯೆ ಪುಷ್ಪಲತಾ, ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣೇಗೌಡ, ಸಹಾಯಕ ಎಂಜಿನಿಯರ್ ಪ್ರಭಾಕರ್, ಗ್ರಾಪಂ ಉಪಾಧ್ಯಕ್ಷೆ ಈಶ್ವರಿ, ಪಿಡಿಒ ಬಿ.ಮಣಿ, ಮುಖಂಡರಾದ ಗಣಪತಿ, ಪೂಣಚ್ಚ, ರಾಮೇಗೌಡ ಇತರರಿದ್ದರು.