Advertisement

ರೈಲ್ವೆ ಟರ್ಮಿನಲ್‌: ಗ್ರಾಮಸ್ಥರಿಗೆ ಆತಂಕ ಬೇಡ

12:04 PM Sep 22, 2018 | |

ಮೈಸೂರು: ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದ ಬೆಳವಣಿಗೆ ದೃಷ್ಟಿಯಿಂದ ಮೈಸೂರಿನ ಹೊರ ವಲಯದ ನಾಗನಹಳ್ಳಿಯಲ್ಲಿ ಉದ್ದೇಶಿತ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಮಾರ್ಚ್‌ನಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

Advertisement

ಮೈಸೂರು -ಬೆಂಗಳೂರು ಮಾರ್ಗ ಮಧ್ಯೆಯ ನಾಗನಹಳ್ಳಿ ರೈಲ್ವೆ ನಿಲ್ದಾಣ ಬಳಿ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 785 ಕೋಟಿ ಅನುದಾನದ ಯೋಜನೆಗೆ ಮಂಜೂರಾತಿ ನೀಡಿದೆ. 

ಗ್ರಾಮಸ್ಥರೊಂದಿಗೆ ಸಭೆ: ಉದ್ದೇಶಿತ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ನಿರ್ಮಾಣ ಯೋಜನೆಗೆ 400 ಎಕರೆಗೂ ಹೆಚ್ಚು ಭೂಮಿ ಅಗತ್ಯವಿರುವುದರಿಂದ ರೈಲ್ವೆ ಇಲಾಖೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸುವ ಮುನ್ನ ಭೂ ಸ್ವಾಧೀನ ಕಾರ್ಯ ಪೂರ್ಣಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್‌ಸಿಂಹ ರೈಲ್ವೇ ಅಧಿಕಾರಿಗಳೊಂದಿಗೆ ನಾಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. 

ಉದ್ದೇಶಿತ ಯೋಜನೆಗಾಗಿ ನಾಗನಹಳ್ಳಿ ರೈಲು ನಿಲ್ದಾಣದ ಎದುರಿನಿಂದ ಸಿದ್ದಲಿಂಗಪುರ ಗ್ರಾಮಕ್ಕೆ ಹೋಗುವ ಮಾರ್ಗದವರೆಗೆ 400 ಎಕರೆ ಭೂ ಸ್ವಾಧೀನ ಮಾಡಲಾಗುವುದು. ಗ್ರಾಮದ ಯಾವುದೇ ರಸ್ತೆ, ಮನೆಗಳು ಹೋಗಲ್ಲ. ಹಾಗಾಗಿ, ಗ್ರಾಮಸ್ಥರು ಆತಂಕ ಪಡುವುದು ಬೇಡ ಎಂದು ಮನವರಿಕೆ ಮಾಡಿಕೊಟ್ಟರು.

ಭೂ ದರ ನಿಗದಿ: ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ನೀಡಲು ಒಪ್ಪಿಗೆ ನೀಡಿರುವ ಗ್ರಾಮಸ್ಥರು ಭೂಮಿ ಸ್ವಾಧೀನಪಡಿಸಿಕೊಳ್ಳುವ ರೈತರ ಕುಟುಂಬಕ್ಕೆ ಉದ್ಯೋಗ ನೀಡುವ ಜೊತೆಗೆ, ಸಿಡಿಪಿ ದರದ ಆಧಾರದಂತೆ ಭೂ ದರ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಒಂದು ಎಕರೆಗೆ ಕನಿಷ್ಠ 2 ಕೋಟಿ ರೂ. ಪರಿಹಾರ ಕೊಡಬೇಕು ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸದಸ್ಯ ದಿನೇಶ್‌, ತಾಪಂ ಸದಸ್ಯೆ ತುಳಸಿ ಗೋವಿಂದರಾಜು, ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ಸಹಾಯಕ ವ್ಯವಸ್ಥಾಪಕ ಅಜಯ್‌ಸಿನ್ಹಾ ಇನ್ನಿತರರು ಇದ್ದರು.

ಭೂ ಸ್ವಾಧೀನ ಕುಟುಂಬಕ್ಕೆ ರೈಲ್ವೇಯಲ್ಲಿ ಗ್ರೂಪ್‌ ಡಿ ಹುದ್ದೆ ಕೊಡುವ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದು. ಸ್ವಾಧೀನಪಡಿಸಿಕೊಂಡ ಭೂಮಿಗೆ ಕೇಂದ್ರ ಸರ್ಕಾರ ನ್ಯಾಯಯುತ ಬೆಲೆ ಕೊಡಿಸಲು ಒತ್ತಡ ಹೇರಲಾಗುವುದು.
-ಪ್ರತಾಪ್‌ಸಿಂಹ, ಸಂಸದ 

ನಾಗನಹಳ್ಳಿ ದೇಶದ ಭೂಪಟದಲ್ಲಿ ಸೇರಲಿದೆ – ಜಿಟಿಡಿ: ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೆ ಬರುವ ನಾಗನಹಳ್ಳಿ ಗ್ರಾಮದಲ್ಲಿ ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ನಿರ್ಮಾಣವಾಗುವುದರಿಂದ  ನಾಗನಹಳ್ಳಿ ಗ್ರಾಮ ದೇಶದ ರೈಲ್ವೆ ಭೂಪಟದಲ್ಲಿ ಸೇರಲಿದೆ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ರೈತರು ಉಳುಮೆ ಮಾಡುವುದನ್ನು ನಿಲ್ಲಿಸಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಬೇಕು. ನಮ್ಮ ತಾಲೂಕಿನಲ್ಲಿ ಹೆಚ್ಚು ಕೃಷಿಕರನ್ನು ಹೊಂದಿರುವ ಗ್ರಾಮ ನಾಗನಹಳ್ಳಿ. ಸರ್ವೇ ನಡೆಸಿದ ಬಳಿಕ ಡಿಪಿಆರ್‌ ತಯಾರಾಗಲಿದೆ. ಹಿಂದೆ ನಾನು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಎಕರೆಗೆ 35 ಲಕ್ಷ ಕೊಟ್ಟು ಖರೀದಿಸುವಂತೆ ಮಾಡಿದ್ದೆ. ಇದು ಕೃಷಿ ಭೂಮಿಯಾಗಿರುವ ಕಾರಣ ಸೂಕ್ತ ದರ ಕೊಡಿಸಲಾಗುವುದು ಎಂದರು.

ರೈಲ್ವೇ ಟರ್ಮಿನಲ್‌ ನಿರ್ಮಾಣದಿಂದ ಉದ್ಯೋಗಾವಕಾಶ ಹೆಚ್ಚುವ ಜೊತೆಗೆ ಇಲ್ಲಿ ಆರ್ಥಿಕ ಚಟುವಟಿಕೆಗೆ ನೆರವಾಗಲಿದೆ. ಅಧಿಕಾರಿಗಳು ಭೂಮಿಯ ಸರ್ವೇ ಕಾರ್ಯ ಮುಗಿದ ಬಳಿಕ ಅದಾಲತ್‌ ನಡೆಸಿ ಭೂಮಿ ಹೊಂದಿರುವ ರೈತನಿಗೆ ಖಾತೆ ಮಾಡಿಸಿಕೊಡಬೇಕು. ಪರಿಹಾರ ವಿತರಣೆ ವೇಳೆ ಯಾವುದೇ ಗೊಂದಲ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹುಲಿ ಒಡೆದ ಜಿಟಿಡಿ : ಪ್ರತಾಪ್‌ಸಿಂಹ ಹೊಗಳಿಕೆ
ಮೈಸೂರು:
ಒಡೆದರೆ ಹುಲಿಯನ್ನೇ ಒಡೆಯಬೇಕು ಎಂಬ ಮಾತಿನಂತೆ ಜಿ.ಟಿ.ದೇವೇಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯನ್ನೇ ಸೋಲಿಸಿದವರು ಎಂದು ಸಂಸದ ಪ್ರತಾಪ್‌ ಸಿಂಹ ಹಾಡಿ ಹೊಗಳಿದರು. ಸಚಿವ ಜಿ.ಟಿ.ದೇವೇಗೌಡ ಅತಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದರಿಂದ ಸ್ಯಾಟಲೈಟ್‌ ರೈಲ್ವೇ ಟರ್ಮಿನಲ್‌ ನಿರ್ಮಾಣಕ್ಕೆ ಭೂ ಸ್ವಾಧೀನ ಕಾರ್ಯ ಬೇಗನೆ ಆಗಲಿದೆ ಎಂದರು.

ಸ್ಯಾಟಲೈಟ್‌ ರೈಲ್ವೆ ಟರ್ಮಿನಲ್‌ ನಿರ್ಮಾಣಕ್ಕೆ ಅಗತ್ಯವಾದ ಅನುದಾನವನ್ನು ಪ್ರಧಾನಿ ಮೋದಿ ಮಂಜೂರು ಮಾಡಿದ್ದಾರೆ. ಎರಡನೇ ಸ್ತರದ ನಗರವನ್ನು ಬೆಳೆಸುವ ಕಾರಣಕ್ಕಾಗಿ 7 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹತ್ತು ಪಥದ ರಸ್ತೆಯನ್ನು ಕೇಂದ್ರ ಸರ್ಕಾರವೇ ನಿರ್ಮಾಣ ಮಾಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next