Advertisement

ರೈಲ್ವೇ ಖಾಸಗೀಕರಣ: ಅವಸರದ ನಿರ್ಧಾರ ಸಲ್ಲ

12:50 AM Jun 22, 2019 | mahesh |

ಕೇಂದ್ರ ಸರಕಾರ ರೈಲ್ವೇಯ ಭಾಗಶಃ ಸೇವೆಗಳನ್ನು ಖಾಸಗಿಯವರಿಗೊಪ್ಪಿಸುವ ಪ್ರಸ್ತಾವವನ್ನು ಕಾರ್ಯಗತಗೊಳಿಸುವ ಕುರಿತು ಚಿಂತಿಸುತ್ತಿದೆ. ರೈಲ್ವೇ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸಲು ಈ ಕ್ರಮ ಎನ್ನುವುದು ಸರಕಾರದ ವಾದ. ಈ ವಿಚಾರದಲ್ಲಿ ಕ್ಷಿಪ್ರ ತೀರ್ಮಾನ ಕೈಗೊಳ್ಳುವಂತೆ ತೋರುತ್ತಿದೆ. ಇನ್ನು ಮೂರು ತಿಂಗಳಲ್ಲಿ ಟೆಂಡರ್‌ ಆಹ್ವಾನಿಸಿ ಈ ಪ್ರಕ್ರಿಯೆಗೆ ಚಾಲನೆ ನೀಡುವ ಇರಾದೆ ಸರಕಾರಕ್ಕಿದೆ. ಪ್ರಾಯೋಗಿಕವಾಗಿ ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಹೋಗುವ ರೈಲುಗಳನ್ನು ಖಾಸಗಿಯವರಿಗೊಪ್ಪಿಸಿ ಇದರ ಫ‌ಲಿತಾಂಶ ನೋಡಿಕೊಂಡು ಉಳಿದವುಗಳನ್ನು ಖಾಸಗೀಕರಿಸುವುದು ಉದ್ದೇಶ.

Advertisement

ಹಾಗೆಂದು ರೈಲ್ವೇ ಖಾಸಗೀಕರಣ ಹೊಸ ಪ್ರಸ್ತಾವವೇನೂ ಅಲ್ಲ. ಎರಡೂವರೆ ದಶಕಗಳ ಹಿಂದೆಯೇ ಹೀಗೊಂದು ಚಿಂತನೆ ಮೊಳಕೆಯೊಡೆದಿತ್ತು ಹಾಗೂ ಈ ನಿಟ್ಟಿನಲ್ಲಿ ಕೆಲವೊಂದು ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೆ ಇದಕ್ಕೆ ದೊಡ್ಡ ಅಡ್ಡಿಯಾಗಿರುವುದು ರೈಲ್ವೇ ಕಾರ್ಮಿಕ ಸಂಘಟನೆಗಳು. ಇವುಗಳ ವಿರೋಧದಿಂದಾಗಿ ಈ ಆಲೋಚನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಸರಕಾರ ಯೂನಿಯನ್‌ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ.

ರೈಲ್ವೇ ಖಾಸಗೀಕರಣದ ಸಾಧ್ಯತೆಯನ್ನು ಪರಿಶೀಲಿಸುವ ಸಲುವಾಗಿ ಬಿಬೇಕ್‌ ದೇಬ್‌ರಾಯ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿಯ ವರದಿಯ ಆಧಾರದಲ್ಲಿ ಸರಕಾರ ರೈಲ್ವೇ ಖಾಸಗೀಕರಣಕ್ಕೆ ರೂಪರೇಷೆಯನ್ನು ತಯಾರಿಸುತ್ತಿದೆ. ಬ್ರಿಟನ್‌, ಜರ್ಮನಿ, ಸ್ವೀಡನ್‌, ಆಸ್ಟ್ರೇಲಿಯ, ಅಮೆರಿಕ ಮತ್ತಿತರ ದೇಶಗಳಲ್ಲಿ ಈಗಾಗಲೇ ರೈವೆÉà ಸೇವೆ ಖಾಸಗಿ ವಲಯದಲ್ಲಿದೆ. ಖಾಸಗಿ ಸಹಭಾಗಿತ್ವದಿಂದ ಸ್ಪರ್ಧಾತ್ಮಕತೆ ಹೆಚ್ಚಿ ಜನರಿಗೆ ಉತ್ತಮ ಸೇವೆ ಸಿಗುತ್ತದೆ ಎನ್ನುವುದು ಖಾಸಗೀಕರಣದ ಪರವಾಗಿರುವವರ ವಾದ. ಮುಂದುವರಿದ ದೇಶಗಳ ರೈಲ್ವೇ ಸೇವೆಯನ್ನು ನೋಡುವಾಗ ನಮ್ಮ ರೈಲ್ವೇ ಇನ್ನೂ ಒಂದು ಶತಮಾನದಷ್ಟು ಹಿಂದೆ ಇರುವಂತೆ ಕಾಣಿಸುತ್ತದೆ. ಆದರೆ ವಿದೇಶದ ಪರಿಸ್ಥಿತಿಗೂ ನಮ್ಮ ಪರಿಸ್ಥಿತಿಗೂ ಇರುವ ವಾಸ್ತವಿಕ ಭಿನ್ನತೆಗಳನ್ನು ಕೂಡಾ ಈ ಸಂದರ್ಭದಲ್ಲಿ ಗಮನಿಸಬೇಕು.

ನಮ್ಮ ದೇಶದಲ್ಲಿ ರೈಲ್ವೇ ಮುಕ್ಕಾಲು ಪಾಲು ಜನರ ಮುಖ್ಯ ಸಾರಿಗೆ ಮಾಧ್ಯಮ. ಟಿಕೆಟ್‌ ದರ ಕೈಗೆಟುಕುವಂತಿರುವುದರಿಂದ ಎಷ್ಟೇ ಕಷ್ಟವಾದರೂ ಜನರು ರೈಲಿನಲ್ಲೇ ಪ್ರಯಾಣಿಸುವುದನ್ನು ಬಯಸುತ್ತಾರೆ. ಆದರೆ ರೈಲ್ವೇ ಬಹಳ ವರ್ಷಗಳಿಂದ ನಷ್ಟದಲ್ಲಿ ನಡೆಯುತ್ತಿದೆ. ಲಾಭವಾಗುತ್ತಿರುವುದು ಸರಕು ಸಾಗಾಟದಿಂದ ಮಾತ್ರ. ಪ್ರಯಾಣಿಕರ ಟಿಕೆಟ್‌ ಮೇಲೆ ಸಬ್ಸಿಡಿ ನೀಡಲಾಗುತ್ತಿದ್ದು, ಹೀಗಾಗಿ ಪ್ರತಿ ವರ್ಷ ರೈಲ್ವೇ ಕೊರತೆ ಬಜೆಟನ್ನೇ ಮಂಡಿಸುತ್ತಿದೆ. ಈ ನಷ್ಟದಿಂದ ರೈಲ್ವೇಯನ್ನು ಪಾರು ಮಾಡಲು ಖಾಸಗಿ ಹೂಡಿಕೆ ಅಗತ್ಯ ಎನ್ನುವುದು ಸರಕಾರದ ವಾದ. ಈಗಾಗಲೇ ಬಂದರು, ದೂರ ಸಂಪರ್ಕ, ವಿದ್ಯುತ್‌, ವಿಮಾನ ನಿಲ್ದಾಣ ಮತ್ತು ವಿಮಾನ ಸೇವೆ ಮತ್ತು ಭೂಸಾರಿಗೆಯನ್ನು ಭಾಗಶಃ ಖಾಸಗಿಯವರಿಗೊಪ್ಪಿಸಲಾಗಿದೆ. ಇವುಗಳಿಂದ ಮಿಶ್ರಫ‌ಲ ಸಿಕ್ಕಿದ್ದು, ಹೀಗಾಗಿ ಖಾಸಗೀಕರಣವೊಂದೇ ಸರಕಾರಿ ಉದ್ದಿಮೆ ಮತ್ತು ಸೇವೆಗಳನ್ನು ನಷ್ಟದಿಂದ ಪಾರು ಮಾಡಲು ಇರುವ ಏಕೈಕ ಮಾರ್ಗ ಅಲ್ಲ ಎನ್ನುವುದು ಖಾಸಗೀಕರಣವನ್ನು ವಿರೋಧಿಸುವವರ ವಾದ. ವಿಮಾನ ಯಾನ ಕ್ಷೇತ್ರದಲ್ಲಂತೂ ಖಾಸಗಿ ಕಂಪೆನಿಗಳು ಭಾರೀ ಪ್ರಯಾಸ ಪಡುತ್ತಿವೆ. ಈಗಾಗಲೇ ಕೆಲವು ಕಂಪೆನಿಗಳು ನೆಲಕಚ್ಚಿದ್ದು, ಉಳಿದ ಕಂಪೆನಿಗಳ ಪರಿಸ್ಥಿತಿಯೂ ಹೆಚ್ಚು ಉತ್ತಮವಾಗಿಲ್ಲ. ಈ ಅಂಶವನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು.

ರೈಲ್ವೇ ಖಾಸಗಿಯವರ ಕೈಗೆ ಹೋದರೆ ಟಿಕೆಟ್‌ ದರ ಏರಿಕೆಯಾಗಬಹುದು ಎನ್ನುವುದೇ ಜನಸಾಮಾನ್ಯರಿಗಿರುವ ಆತಂಕ. ಇದು ನಿಜವೂ ಹೌದು. ಉತ್ತಮ ಸೇವೆ ಬೇಕಾದರೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ ಎನ್ನುವ ತರ್ಕ ಖಾಸಗಿಯವರದ್ದು. ಆದರೆ ರೈಲ್ವೇಯಂಥ ಅನಿವಾರ್ಯ ಸಾರ್ವಜನಿಕ ಸೇವೆಯನ್ನು ಲಾಭನಷ್ಟದ ತಕ್ಕಡಿಯಲ್ಲಿಟ್ಟು ತೂಗಿ ನೋಡುವುದು ಸರಿಯೇ ಎಂಬ ಪ್ರಶ್ನೆಯೂ ಇಲ್ಲಿದೆ. ದೇಬ್‌ರಾಯ್‌ ಸಮಿತಿ ಖಾಸಗಿಯವರಿಗೆ ಟಿಕೆಟ್‌ ದರ ನಿರ್ಧರಿಸುವ ಅಧಿಕಾರ ನೀಡುವ ಸಲುವಾಗಿ ಭಾರತೀಯ ರೈಲ್ವೇ ಕಾಯಿದೆಗೆ ತಿದ್ದುಪಡಿ ಮಾಡಬೇಕೆಂಬ ಶಿಫಾರಸನ್ನು ಮಾಡಿದೆ. ಸರಕಾರ ಈ ಶಿಫಾರಸನ್ನು ಪರಿಗಣಿಸಿದರೆ ಅದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಅಗಾಧ ಸಂಖ್ಯೆಯಲ್ಲಿರುವ ನೌಕರ ವರ್ಗದ ರಕ್ಷಣೆ ಮತ್ತು ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸುವುದು ನಿಜಕ್ಕೂ ಅತಿ ದೊಡ್ಡ ಸವಾಲು. ಈ ಸವಾಲನ್ನು ಯಾವ ರೀತಿ ನಿಭಾಯಿಸಲಿದ್ದೇವೆ ಎನ್ನುವುದನ್ನು ಸರಕಾರ ಮೊದಲೇ ಸ್ಪಷ್ಟಪಡಿಸಬೇಕು. ಖಾಸಗೀಕರಣ ಎಂಬ ಮದ್ದು ಎಷ್ಟರಮಟ್ಟಿಗೆ ಮತ್ತು ಯಾವುದಕ್ಕೆ ಎಂಬ ವಿವೇಚನೆ ಹೊಂದಿರದಿದ್ದರೆ ನಮ್ಮಂಥ ದೇಶದಲ್ಲಿ ಅದು ವರಕ್ಕಿಂತ ಶಾಪವಾಗುವ ಸಾಧ್ಯತೆಯ ಹೆಚ್ಚು. ರೈಲ್ವೇಯಂಥ ಮಹತ್ವ ಸೇವಾ ವಲಯವನ್ನು ಖಾಸಗಿ ಸಹಭಾಗಿತ್ವಕ್ಕೆ ತೆರೆಯುವ ಮೊದಲ ಆ ಕುರಿತು ಕೂಲಂಕಷವಾದ ಸಾರ್ವಜನಿಕ ಚರ್ಚೆಯಾಗುವುದು ಅಗತ್ಯ. ಈ ವಿಚಾರದಲ್ಲಿ ಅವಸರದ ತೀರ್ಮಾನ ತೆಗೆದುಕೊಳ್ಳುವುದು ಸರ್ವಥಾ ಸರಿಯಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next