ಕಾರವಾರ: ಉಡುಪಿಯಿಂದ ಮುಂಬೈಗೆ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಳ್ಳತನವಾಗಿದ್ದ ಮಹಿಳಾ ಪ್ರಯಾಣಿಕರ ಬ್ಯಾಗ್ ಆಭರಣ ಸಮೇತ ಮರಳಿ ಹುಡುಕುವಲ್ಲಿ ರೈಲ್ವೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವನಿತಾ ದಿವಾಕರ ಶೆಟ್ಟಿ ಕಳೆದುಕೊಂಡಿದ್ದ 2.20 ಲಕ್ಷ ರೂ. ಬೆಲೆಯ ಬಂಗಾರದ ಆಭರಣಗಳು ಸಹ ಮರಳಿ ಸಿಕ್ಕಿವೆ. ರೈಲ್ವೆ ಪೊಲೀಸರು ಬ್ಯಾಗ್ ಕಳ್ಳನನ್ನು ಸಿಸಿಟಿವಿ ಕ್ಯಾಮರಾ ನೆರವಿನಿಂದ ಸೆರೆ ಹಿಡಿದಿದ್ದಾರೆ.
ಮಂಗಳಾ ಎಕ್ಸ್‌ಪ್ರೆಸ್ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವನಿತಾ ಶೆಟ್ಟಿ ಬ್ಯಾಗ್‌ನಲ್ಲಿ ಬಂಗಾರದ ಬಳೆ, ಮಾಂಗಲ್ಯ, ಎಟಿಎಂ, ಆಧಾರ್ ಕಾರ್ಡ್, 6000 ನಗದುಳ್ಳ ಬ್ಯಾಗ್‌ನೊಂದಿಗೆ ಮುಂಬೈಗೆ ಪ್ರಯಾಣಿಸುತ್ತಿದ್ದರು. ಉಡುಪಿಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಅವರ ಬ್ಯಾಗ್ ಕಾಣೆಯಾಗಿತ್ತು. ತಕ್ಷಣವೇ ಟಿಟಿಇ ಅವರ ಗಮನಕ್ಕೆ ತಂದಿದ್ದಾರೆ. ಈ ವಿಷಯ ಕ್ಷಣಾರ್ಧದಲ್ಲಿ ಮಡಗಾಂವ್ ಆರ್‌ಪಿಎಫ್ ವಿನೋದಕುಮಾರ್‌ಗೆ ತಲುಪಿದೆ. ಅವರು ಸಿಸಿಟಿವಿ ಪರೀಕ್ಷಿಸಿದಾಗ ಕ್ಯಾಪ್ ಧರಿಸಿದ್ದ ವ್ಯಕ್ತಿಯ ಅನುಮಾನಾಸ್ಪದ ಚಲನವಲನ ಎಸಿ ಕೋಚ್‌ನಲ್ಲಿ ಕಂಡು ಬಂದದ್ದನ್ನು ಎಲ್ಲಾ ರೈಲ್ವೆ ನಿಲ್ದಾಣಗಳ ಪೊಲೀಸರ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗೆ ಹಂಚಿದ್ದಾರೆ.
ಇದನ್ನೂ ಓದಿ:ದೀಪಾವಳಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಕಾರು ಅಪಘಾತ : ಒಂದೇ ಕುಟುಂಬದ ನಾಲ್ವರು ದುರ್ಮರಣ
ಮಂಗಳಾ ಎಕ್ಸ್‌ಪ್ರೆಸ್‌ನಲ್ಲಿ ಕದ್ದ ಕಳ್ಳ ಶನಿವಾರ ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಊರಿಗೆ ಮರಳುತ್ತಿದ್ದ. ಆತನನ್ನು ಕಾರವಾರದ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಕರ್ತವ್ಯದಲ್ಲಿದ್ದ ಪೊಲೀಸ್ ವಿನಾಯಕ ಆರ್.ಡಿ. ಗುರುತಿಸಿದ್ದಾರೆ. ಕೊಂಕಣ ರೈಲ್ವೆ ಪೊಲೀಸರ ಸಹಾಯದಿಂದ ಕಳ್ಳತನ ಮಾಡಿದ್ದ ನಿಖೀಲ್ ಕುಮಾರ್‌ನನ್ನು ಬಂಧಿಸಲಾಗಿದೆ. ಬಂಧಿತನಿಂದ 2.20 ಲಕ್ಷದ ಬಂಗಾರದ ಆಭರಣ ವಶಪಡಿಸಿಕೊಂಡು ಸೆಕ್ಷನ್ 379 ಐಪಿಸಿ ಅಡಿ ಪ್ರಕರಣ ದಾಖಲಿಸಲಾಗಿದೆ.
ರೈಲ್ವೆ ಎಸಿ ಬೋಗಿಯಲ್ಲಿ ಕದಿಯುತ್ತಿದ್ದ ನಿಖೀಲಕುಮಾರ್ ಕೇರಳದ ಕಣ್ಣೂರು ಮೂಲದವನು ಎಂದು ತಿಳಿದು ಬಂದಿದೆ. ವನಿತಾ ಶೆಟ್ಟಿ ಅವರಿಗೆ ಶೀಘ್ರವಾಗಿ ಅವರ ಒಡವೆ ಮರಳಿಸಲಾಗುವುದು ಎಂದು ಕೊಂಕಣ ರೈಲ್ವೆ ಪಿಆರ್‌ಒ ಸುಧಾ ಕೃಷ್ಣ ಮೂರ್ತಿ ತಿಳಿಸಿದ್ದಾರೆ.