Advertisement

ರೈಲ್ವೇ ಮೇಲ್ಸೇತುವೆ ನಿರ್ವಹಣೆ ಗೊಂದಲ: ಕಾವಡಿ-ಮಧುವನ ರಸ್ತೆ ಕೆಸರುಮಯ

06:00 AM Jul 09, 2018 | Team Udayavani |

ಕೋಟ: ನಿರ್ವಹಣೆ ಕೊರತೆಯಿಂದ ಪ್ರತಿ ವರ್ಷ ಕಾವಡಿ ಹಾಗೂ ಮಧುವನದ ರೈಲ್ವೇ ಮೇಲ್ಸೇತುವೆ ರಸ್ತೆ  ಕೆಸರು ಗದ್ದೆಯಂತಾಗುತ್ತದೆ. ಇದರ ದುರಸ್ತಿಗೆ ಯಾರೂ ಕ್ರಮಕೈಗೊಳ್ಳುತ್ತಿಲ್ಲ. ಜತೆಗೆ ಯಾರು ನಿರ್ವಹಣೆ ಮಾಡಬೇಕು ಎಂಬುದರ ಬಗ್ಗೆಯೇ ಗೊಂದಲವಿದೆ. 
 
ಕಾವಡಿ ಸೇತುವೆ ಕೆಸರುಗದ್ದೆ  
ಕಾವಡಿ ರೈಲ್ವೇ ಸೇತುವೆ ಸಂಪೂರ್ಣವಾಗಿ ನೀರು ನಿಂತು ಹೊಂಡಗಳು ಸೃಷ್ಟಿಯಾಗಿ ಕೆಸರು ಗದ್ದೆಯಂತಾಗಿದೆ. ಇಲ್ಲಿ ಪಾದಚಾರಿಗಳಿಗೆ ನಡೆದಾಡಲು ಕಷ್ಟ ಸಾಧ್ಯ ಪರಿಸ್ಥಿತಿ ಇದೆ. ಸೇತುವೆಯಲ್ಲಿ ಎರಡು ವಾಹನಗಳು ಎದುರಾದರೆ  ಒಂದು ವಾಹನ ಸೇತುವೆ ದಾಟುವ ತನಕ ಮತ್ತೂಂದು ವಾಹನ ಕಾದು ನಿಲ್ಲಬೇಕು. ಸೇತುವೆ ಆರಂಭದಲ್ಲೇ ಟೆಲಿಪೋನ್‌ ದುರಸ್ತಿಗಾಗಿ ರಸ್ತೆ ಆಗೆದಿದ್ದು ಇದೀಗ ದೊಡ್ಡ ಕಂದಕ ಸೃಷ್ಟಿಯಾಗಿದೆ.

Advertisement

ಈ ರಸ್ತೆ ಕಾರ್ಕಡ ಸಾಲಿಗ್ರಾಮದ ಮೂಲಕ ರಾಷ್ಟ್ರೀಯ  ಹೆದ್ದಾರಿಯನ್ನು ಹಾಗೂ ಯಡ್ತಾಡಿಯಲ್ಲಿ ಜಿಲ್ಲಾ ಮುಖ್ಯರಸ್ತೆಯನ್ನು  ಸಂಪರ್ಕಿಸುತ್ತದೆ. ಹೀಗಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಇಲ್ಲಿ ಪ್ರತಿ ನಿತ್ಯ ಸಂಚರಿಸುತ್ತಾರೆ. 
 
ಮಧುವನದಲ್ಲೂ ಇದೇ ಸಮಸ್ಯೆ  
ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯರಸ್ತೆಯಲ್ಲಿ ಬರುವ ಮಧುವನ ರೈಲ್ವೇ ಮೇಲ್ಸೇತುವೆಯಲ್ಲೂ ಇದೇ ರೀತಿ ಸಮಸ್ಯೆ ಇದೆ. ಇಲ್ಲಿ ಕೂಡ ಪ್ರತಿ ವರ್ಷ ವಾಹನ ಸವಾರರು, ಪಾದಚಾರಿಗಳು ಸಂಕಷ್ಟಪಡುತ್ತಾರೆ. ಕಳೆದ ವರ್ಷ  ರಸ್ತೆ ದುರಸ್ತಿ  ಸಂದರ್ಭ  ಡಾಂಬರೀಕರಣ ಕೈಗೊಂಡರೂ ಈ ಬಾರಿ ಮತ್ತೆ ಹೊಂಡ ಸೃಷ್ಟಿಯಾಗಿದೆ.

ಸೇತುವೆಗೆ ಅಪಾಯ  
ಇದೇ ರೀತಿ ಮುಂದುವರಿದರೆ  ಸೇತುವೆ ಶಿಥಿಲಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಸೇತುವೆ ಶಿಥಿಲಗೊಂಡು  ಬಿರುಕು ಬಿಟ್ಟಲ್ಲಿ  ಕೊಂಕಣ ರೈಲ್ವೇ ಸಂಚಾರಕ್ಕೂ ಅಡ್ಡಿಯಾಗಲಿದೆ. ಸೇತುವೆಯಿಂದ ನೀರು ಹೊರಗಡೆ ಹೋಗಲು ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.   

ನಿರ್ವಹಣೆ ಯಾರ ಹೊಣೆ?
ರಸ್ತೆ ಜಿ.ಪಂ., ಪಿ.ಡಬ್ಲೂ.ಡಿ.ಗೆ ಸೇರುತ್ತದೆ. ಸೇತುವೆ ರೈಲ್ವೇ ಇಲಾಖೆಯದ್ದು. ನಾವು ದುರಸ್ತಿಗೆ ಮುಂದಾದರೆ ರೈಲ್ವೇ ಇಲಾಖೆಯವರು ಆಕ್ಷೇಪಿಸುತ್ತಾರೆ ಎನ್ನುವುದು ಸ್ಥಳೀಯಾಡಳಿತದ ಉತ್ತರ.  ಪ್ರತಿ ವರ್ಷ ಸಾರ್ವಜನಿಕರ ದೂರು ಹಾಗೂ ಪತ್ರಿಕೆಗಳಲ್ಲಿ ಸಮಸ್ಯೆಯ ಕುರಿತು ವರದಿ ಪ್ರಕಟವಾದರೂ ರೈಲ್ವೇ ಇಲಾಖೆ ಈ ಕುರಿತು ಗಮನಹರಿಸಿಲ್ಲ. ಜಿ.ಪಂ.,  ಪಿ.ಡಬ್ಲೂ.ಡಿ.ಯವರೂ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.  ಹೀಗಾಗಿ ರೈಲ್ವೇ ಮೇಲ್ಸೇತುವೆಯ ನಿರ್ವಹಣೆ ಯಾರ ಹೊಣೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ
ಪ್ರತಿ ವರ್ಷ ಸೇತುವೆಯಲ್ಲಿ ನೀರು ನಿಂತು ಸಮಸ್ಯೆ ಎದುರಾಗುತ್ತಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ಕುರಿತು ಗಮನಹರಿಸಿ ದುರಸ್ತಿಗೆ ಕ್ರಮಕೈಗೊಳ್ಳಬೇಕು.
– ಸುಕುಮಾರ ಶೆಟ್ಟಿ ಕಾವಡಿ,ಸ್ಥಳೀಯ ನಿವಾಸಿ

Advertisement

ಡಿಸಿಗೆ ಮನವಿ
ಕಾವಡಿ ಹಾಗೂ ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಸಮಸ್ಯೆ ಎದುರಾಗುತ್ತದೆ. ಪಂಚಾಯತ್‌ ಅನುದಾನದಲ್ಲಿ ಇದನ್ನು ದುರಸ್ತಿಪಡಿಸಲು ಸಾಧ್ಯವಿಲ್ಲ ಹಾಗೂ ಇದರ ನಿರ್ವಹಣೆಯನ್ನು ಯಾರು ಮಾಡಬೇಕು ಎನ್ನುವ ಬಗ್ಗೆ ಗೊಂದಲವಿದೆ.  ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಲಿದ್ದೇವೆ.
– ಹೇಮಾ,
ಅಧ್ಯಕ್ಷರು ವಡ್ಡರ್ಸೆ ಗ್ರಾ.ಪಂ.

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next