Advertisement

Railway ಮೂರು ವಿಭಾಗದ ರೈಲ್ವೇ ಅಧಿಕಾರಿಗಳ ಸಮಿತಿ ರಚನೆಗೆ ಸೋಮಣ್ಣ ಸೂಚನೆ

01:50 AM Jul 18, 2024 | Team Udayavani |

ಮಂಗಳೂರು: ಕರಾವಳಿ ಭಾಗದ ರೈಲ್ವೇ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಹಾಗೂ ಯೋಜನೆಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕೊಂಕಣ ರೈಲ್ವೇ, ದಕ್ಷಿಣ ಹಾಗೂ ನೈಋತ್ಯ ಈ ಮೂರೂ ರೈಲ್ವೇ ಅಧಿಕಾರಿ ಗಳನ್ನೊಳಗೊಂಡ ಸಮಿತಿ ಯನ್ನು ರಚಿಸುವಂತೆ ರೈಲ್ವೇ ಹಾಗೂ ಜಲ ಶಕ್ತಿ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಸೂಚನೆ ನೀಡಿದ್ದಾರೆ.

Advertisement

ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ರೈಲ್ವೇ ಅಧಿಕಾರಿಗಳು, ಸಂಸದರು, ಶಾಸಕರನ್ನೊಳ ಗೊಂಡಂತೆ ಸಭೆ ನಡೆಸಿದರು.

ಮೂರು ರೈಲ್ವೇ ವಿಭಾಗಗಳ ಅಧಿಕಾರಿಗಳು, ಜತೆಯಲ್ಲಿ ಸಂಸದರು, ಜಿಲ್ಲಾಧಿಕಾರಿಗಳು ಇರಬೇಕು, ಅಭಿವೃದ್ಧಿಗೆ ಅಡ್ಡಿಯಾಗುವ ಯಾವುದೇ ತಾಂತ್ರಿಕ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ 15 20 ದಿನದಲ್ಲಿ ನನಗೆ ವರದಿ ಕೊಡಬೇಕು ಎಂದು ಸೂಚಿಸಿದರು.

ಮಂಗಳೂರು ವಿಶಿಷ್ಟ ಪ್ರದೇಶವಾಗಿದ್ದು, ಕೊಂಕಣ ರೈಲ್ವೇ, ದಕ್ಷಿಣ ಹಾಗೂ ನೈಋತ್ಯ ರೈಲ್ವೇಗಳ ಮಧ್ಯೆ ಹಂಚಿ ಹೋಗಿರುವುದು ಇಲ್ಲಿನ ಸಮಸ್ಯೆ ಭಿನ್ನವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿನ ರೈಲ್ವೇ ಅಭಿವೃದ್ಧಿಗೊಂದು ಶಾಶ್ವತ ವ್ಯವಸ್ಥೆ ಬರಬೇಕಿದೆ, ಇಲ್ಲಿಗೆ ಪ್ರತ್ಯೇಕ ವಿಭಾಗವಾಗಬೇಕು ಎನ್ನುವ ಬೇಡಿಕೆಯೂ ಇದೆ. ಹಾಗಾಗಿ ಅದು ಸಾಧ್ಯವಾಗುವ ವರೆಗೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುವಂತೆ ಈ ಸಮಿತಿ ಮೂರು ತಿಂಗಳಿಗೊಮ್ಮೆ ಜನಪ್ರತಿನಿಧಿಗಳಿದ್ದುಕೊಂಡು ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ಶಿರೂರು ಗುಡ್ಡ ಕುಸಿತ; ಸೂಕ್ತ ಮುನ್ನೆಚ್ಚರಿಕೆ
ಉತ್ತರ ಕನ್ನಡದ ಶಿರೂರು ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿತ ವಿಚಾರದ ಹಿನ್ನೆಲೆಯಲ್ಲಿ ರೈಲ್ವೇ ಮಾರ್ಗಗಳ ಮೇಲೂ ನಿಗಾ ಇಡಲಾಗಿದೆ. ರೈಲ್ವೇ ಇಲಾಖೆಯಿಂದ ನಮ್ಮದೇ ಆದ ವ್ಯವಸ್ಥೆಯಲ್ಲಿ ಪಾಕೃತಿಕ ವಿಕೋಪ ನಿರ್ವಹಣೆ ಮಾಡುತ್ತೇವೆ. ವಾರ್‌ ರೂಂ ಮಾಡಿದ್ದೇವೆ. ಎಲ್ಲ ಕಡೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದರು.

Advertisement

ಹಳೆಯ ಸಿದ್ದರಾಮಯ್ಯನಲ್ಲ
ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ನಾನು ಅವರ ಜತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಿದ್ದರಾಮಯ್ಯ ಈವತ್ತು ಇಲ್ಲ ಎಂದು ಕೇಂದ್ರ ರೈಲ್ವೇ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರದ ಕುರಿತು ಮಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಇವತ್ತು ಇರುವ ಸಿದ್ದರಾಮಯ್ಯನವರ ಬಗ್ಗೆ ನನಗೂ ಒಂದು ರೀತಿ ಅನುಮಾನ ಆಗಿದೆ. ಯಾರಿಂದಲೂ ವಾಸ್ತವಾಂಶವನ್ನು ಮುಚ್ಚಿ ಹಾಕಲು ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next