ಹೊಸದಿಲ್ಲಿ : ರಾಜಧಾನಿ, ತುರಂತೋ, ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳಲ್ಲಿ ದುಬಾರಿ ದರ ತೆತ್ತು ಪ್ರಯಾಣಿಸುವವರಿಗೆ ಕೇಂದ್ರ ಸರಕಾರ ಲೋಕಸಭಾ ಚುನಾವಣೆಗೆ ಮುನ್ನವೇ ಫ್ಲೆಕ್ಸಿ ದರ ಯೋಜನೆಯ ಮೂಲಕ ಶೇ.50 ರ ರಿಯಾಯಿತಿ ರಿಲೀಫ್ ನೀಡಲಿದೆ ಎಂದು ವರದಿಗಳು ತಿಳಿಸಿವೆ.
ಪ್ರೀಮಿಯಂ ಟ್ರೈನ್ ಗಳೆಂದೇ ಕರೆಯಲ್ಪಡುವ ರಾಜಧಾನಿ, ತುರಂತೋ, ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣಕ್ಕೆ ಸರಕಾರ ಶೇ.50ರ ರಿಯಾಯಿತಿ ನೀಡಲಿದೆಯಾದರೆ ಕೊನೇ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಅಥವಾ ರೈಲುಗಳು ನಿರ್ಗಮಿಸುವ ನಾಲ್ಕು ದಿನ ಮುನ್ನ ಟಿಕೆಟ್ ಬುಕ್ ಮಾಡುವವರಿಗೆ ನೂರಕ್ಕೂ ಅಧಿಕ ಪ್ರಮುಖ ರೈಲುಗಳಲ್ಲಿ (ಪ್ರೀಮಿಯಂ ಟ್ರೈನ್) ಶೇ.50ರ ದರ ರಿಯಾಯಿತಿ ಸಿಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದಲ್ಲದೆ ಶೇ.40ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಖಾಲಿ ಇದ್ದು ಓಡುವ ರೈಲುಗಳಲ್ಲಿ ಸರಕಾರ ಫ್ಲೆಕ್ಸಿ ಫೇರ್ ಟಿಕೆಟ್ ರೂಪದಲ್ಲಿ ಪ್ರಯಾಣಿಕರಿಗೆ ಶೇ.20ರ ರಿಯಾಯಿತಿ ನೀಡಲಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನವೇ ಸರಕಾರ ಹೊಸ ಶುಲ್ಕ ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ.
ಕನಿಷ್ಠ 13 ವಯಲಗಳಲ್ಲಿನ ವಿಮಾನ ಪ್ರಯಾಣ ದರವು ರೈಲು ಪ್ರಯಾಣ ದರಗಳಿಗಿಂತ ಅಗ್ಗ ಇದೆ ಎಂಬುದನ್ನು ಈಚೆಗೆ ತೋರಿಸಿಕೊಡುವ ಮೂಲಕ ಸಿಎಜಿ, ರೈಲ್ವೇ ಇಲಾಖೆ ವಿರುದ್ಧ ಹರಿಹಾಯ್ದಿತ್ತು.