Advertisement

ರೈಲ್ವೆ ಕೋಚ್‌ ಫ್ಯಾಕ್ಟರಿ ಕನಸು ನನಸಾದೀತ

05:24 PM Feb 01, 2018 | Team Udayavani |

ಕೋಲಾರ: ಕೇಂದ್ರ ಸರಕಾರ ಎರಡನೇ ಬಾರಿಗೆ ರೈಲ್ವೆ ಬಜೆಟ್‌ನೊಂದಿಗೆ ಕೇಂದ್ರ ಬಜೆಟ್‌ ಅನ್ನು ಮಂಡಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಜನರ ನಿರೀಕ್ಷೆಗಳು ಸಾಕಷ್ಟಿಲ್ಲವಾದರೂ, ಹಿಂದಿನ ಬಜೆಟ್‌ಗಳಲ್ಲಿ ಅನುಷ್ಠಾನವಾಗಿರುವ ಯೋಜನೆಗಳ ಪೈಕಿ ಇಡೀ ವರ್ಷದಲ್ಲಿ ಕೋಲಾರ ಜಿಲ್ಲೆಗೆ ದಕ್ಕಿದ್ದೆಷ್ಟು ಎಂಬುದನ್ನು ಅವಲೋ ಕಿಸಿದರೆ ಖಂಡಿತ ನಿರಾಸೆ ಭಾವ ಮೂಡುತ್ತದೆ.

Advertisement

ರೈತರ ಆದಾಯ ದ್ವಿಗುಣವಾಗಲಿಲ್ಲ: ಕಳೆದ ಬಜೆಟ್‌ನಲ್ಲಿ ಅರ್ಥ ಸಚಿವ ಅರುಣ್‌ ಜೇಟ್ಲಿ ಅವರು ರೈತರ ಆದಾಯವನ್ನು ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಆದರೆ, ಕೋಲಾರ ಜಿಲ್ಲೆಯ ರೈತರ ಆದಾಯ ದ್ವಿಗುಣಗೊಳ್ಳು ವುದಿರಲಿ ಹಿಂದಿನ ವರ್ಷ ದಷ್ಟೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಗೆಟುಕದ ಬಜೆಟ್‌ ಘೋಷಣೆಗಳು: ಹಾಲು ಉತ್ಪಾದ ನೆಗೆ 8 ಸಾವಿರ ಕೋಟಿ ರೂ. ನಿಧಿಯನ್ನು ಪ್ರತ್ಯೇಕವಾಗಿ ಸ್ಥಾಪಿಸಲಾಗಿತ್ತು. ಆದರೆ, ಈ ನಿಧಿಯಿಂದ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಕೋಲಾರ ಜಿಲ್ಲೆಗೆ ಯಾವುದೇ ವಿಶೇಷ ಯೋಜನೆ
ಮಂಜೂರಾಗಲಿಲ್ಲ. ಫ‌ಸಲ್‌ ಬಿಮಾ ಯೋಜನೆಯಡಿ 9 ಸಾವಿರ ಕೋಟಿ ರೂ. ನಿಗದಿಪಡಿಸ ಲಾಗಿತ್ತು. ಆದರೆ, ಕೋಲಾರ ಜಿಲ್ಲೆಯ ಬರಪೀಡಿತ ರೈತರ ಫ‌ಸಲ್‌ ಬಿಮಾ ಯೋಜನೆಯ ವಿಮಾ ಪರಿಹಾರ ಒಂದೂವರೆ ಕೋಟಿ ರೂ.ಗೂ ಅಧಿಕ ಹಣ ಇನ್ನೂ ಪಾವತಿಯಾಗಲೇ ಇಲ್ಲ. ಈ ಬಗ್ಗೆ ರೈತರು ಹಲವಾರು ಹೋರಾಟ ಗಳನ್ನು ನಡೆಸಿ ದರೂ ಪ್ರಯೋಜನವಾಗಿಲ್ಲ.

ಆರಂಭವಾಗದ ಕೈಗಾರಿಕೆಗಳು: ಸಹಕಾರ ಸಂಸ್ಥೆಗಳ ಮೂಲಕ 19 ಸಾವಿರ ಕೋಟಿ ರೂ. ಸಾಲ ನೀಡಲಾಗುವುದೆಂದು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತಾದರೂ, ಯಾವ ಬ್ಯಾಂಕಿನಿಂದ ಈ ಸಾಲ ನೀಡಲಾಯಿತು ಎಂಬ ಬಗ್ಗೆ ಜಿಲ್ಲೆಯ ಜನತೆಗೆ ಮಾಹಿತಿಯೇ
ಇಲ್ಲದಂತಾಯಿತು. ನೋಟುಗಳ ಬದಲಾವಣೆ ನಂತರ ಮಂಡಿಸಿದ ಮೊದಲ ಬಜೆಟ್‌ನಲ್ಲಿ ಮುಂದಿನ ವರ್ಷದೊಳಗೆ ಉದ್ಯೋಗವಕಾಶ ಗಳನ್ನು ಹೆಚ್ಚಿಸಲಾಗುವುದೆಂದು ಹೇಳಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಕೈಗಾರಿಕೆಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರಂಭವಾಗಲಿಲ್ಲ. ಆದ್ದರಿಂದ ಎಂಜಿನಿಯರ್‌ ಸೇರಿದಂತೆ ವಿವಿಧ ಪದವೀಧರ ಯುವಕರು ಉದ್ಯೋಗಕ್ಕಾಗಿ ಪರಿತಪಿಸುವಂತಾಗಿದೆ.

ಟ್ಯಾಂಕರ್‌ ನೀರೇ ಆಸರೆ: ದೇಶಾದ್ಯಂತ 28 ಸಾವಿರ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವುದಾಗಿ ಬಜೆಟ್‌ ಘೋಷಣೆ ಇದ್ದರೂ, ಕೋಲಾರ ಜಿಲ್ಲೆಯ ನೂರಾರು ಗ್ರಾಮಗಳಿಗೆ ಇಂದಿಗೂ ಟ್ಯಾಂಕರ್‌ ನೀರೇ ಆಸರೆಯಾಗಿದೆ. ಗ್ರಾಮೀಣ ರಸ್ತೆಗಳ ನಿರ್ಮಾಣದಲ್ಲೂ ಹೇಳಿಕೊಳ್ಳುವಂತಹ ಸಾಧನೆ ಯಾಗಲಿಲ್ಲ. ಗುಡಿಸಲು ಮುಕ್ತ ಭಾರತ ನಿರ್ಮಾಣ ಘೋಷಣೆಗೆ ಕೋಲಾರ ಜಿಲ್ಲೆಯ ಗಡಿ ಗ್ರಾಮಗಳಲ್ಲಿರುವ ಗುಡಿಸ ಲುಗಳು ಅಣಕಿಸುತ್ತಲೇ ಇವೆ. ಪರಿಶಿಷ್ಟ ಜಾತಿ, ವರ್ಗದವರ ಕಲ್ಯಾಣಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸುವುದಾಗಿ ಘೋಷಿಸಲಾಗಿತ್ತಾದರೂ ಅನುಷ್ಠಾನಕ್ಕೆ ಬಂದಿದ್ದು ಅರಿವಾಗಲೇ ಇಲ್ಲ. ಐವತ್ತು ಸಾವಿರ ಗ್ರಾಪಂಗಳಲ್ಲಿ
ಬಡತನ ನಿರ್ಮೂಲನೆ ಎನ್ನುವುದು ಕೋಲಾರ ಜಿಲ್ಲೆಯ ಮಟ್ಟಿಗೆ ಕಣ್ಣಿಗೆ ಕಾಣಿಸದಂತಾಗಿದೆ. 

Advertisement

ಈಡೇರದ ರೈಲ್ವೆ ಬಜೆಟ್‌ ಘೋಷಣೆಗಳು: ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಯುಪಿಎ ಸರಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದಾಗ ಜಿಲ್ಲೆಯ ಬಹುತೇಕ ರೈಲ್ವೆ ಬೇಡಿಕೆಗಳು ಬಜೆಟ್‌ನಲ್ಲಿ ಮಂಡನೆಯಾಗಿದ್ದವು. ಆದರೆ, ದುರಾದೃಷ್ಟವೆಂದರೆ ಇದಾವುದೂ ಅನುಷ್ಠಾನಕ್ಕೆ ಬರಲೇ ಇಲ್ಲ. ಕೋಲಾರ ಜಿಲ್ಲೆಯಲ್ಲಿ ಭಾನುವಾರದ ವೇಳೆಯೂ ಮಾರಿಕುಪ್ಪಂನಿಂದ ಬೆಂಗಳೂರಿಗೆ ರೈಲು ಆರಂಭಿಸಿದ್ದು ಹೊರತುಪಡಿಸಿದರೆ, ಉಳಿದಂತೆ ಬಜೆಟ್‌ ಘೋಷಣೆಯ ಯಾವುದೇ ಹೊಸ ಯೋಜನೆಗಳು ಅನುಷ್ಠಾನ ಹಂತಕ್ಕೆ ಬಂದಿಲ್ಲ. 

ಗಗನ ಕುಸುಮವಾದ ರೈಲ್ವೆ ಯೋಜನೆ: ಚಿತ್ತೂರು ಮುಳಬಾಗಿಲು ಕೋಲಾರ ಮಾರ್ಗದ ಸರ್ವೆ ನೆನೆಗುದಿಗೆ ಬಿದ್ದಿದೆ. ಇದರ ಮುಂದು ವರಿದ ಭಾಗವಾಗಿರುವ ಕೋಲಾರ ವೈಟ್‌ಫಿಲ್ಡ್‌ ಮಾರ್ಗದ ಸರ್ವೆ ಜಾರಿಯಾಗಲಿಲ್ಲ. ಕೋಲಾರ ಶ್ರೀನಿವಾಸಪುರ ಪ್ರದೇಶದಲ್ಲಿ ಬೃಹತ್‌ ರೈಲ್ವೆ ಕೋಚ್‌ ಫ್ಯಾಕ್ಟರಿ ಆರಂಭ ಕಾರ್ಯ ಕೂಡ ಭೂಸ್ವಾಧೀನ ಪ್ರಕ್ರಿಯೆಯ ಸುಳಿಯಲ್ಲಿ ಸಿಲುಕಿದೆ. 

ಶ್ರೀನಿವಾಸಪುರ ನಿಲ್ದಾಣವನ್ನು ಸಿಟಿಎಂ ರೈಲು ನಿಲ್ದಾಣಕ್ಕೆ ಸಂಪರ್ಕಿಸುವ ದಶಕಗಳ ಬೇಡಿಕೆ ಈಡೇರದಂತಾಗಿದೆ. ಮಾರಿಕುಪ್ಪಂ ಕುಪ್ಪಂ ನಡುವಿನ ರೈಲು ಮಾರ್ಗ ಅನುಷ್ಠಾನಗೊಳ್ಳಲಿಲ್ಲ. ಕೋಲಾರ ರೈಲು ನಿಲ್ದಾಣದಲ್ಲಿ ಹಣ್ಣು, ತರಕಾರಿ ಸರಬರಾಜು ಮಾಡಲು ಪ್ರತ್ಯೇಕ ವ್ಯಾಗನ್‌ ಟ್ರ್ಯಾಕ್‌ ಅಳವಡಿಸುವ ಭರವಸೆ ಈಡೇರಲಿಲ್ಲ. ಒಟ್ಟಾರೆ, ಯುಪಿಎ ಸರಕಾರದಲ್ಲಿ ಮಂಡಿಸಿದ್ದ ಬಹುತೇಕ ರೈಲ್ವೆ ಯೋಜನೆಗಳು ಜಿಲ್ಲೆಯ ಪಾಲಿಗೆ ಗಗನ ಕುಸುಮವಾಗಿವೆ.

ರೈಲ್ವೆ ಪ್ರಯಾಣಿಕರ ಹಲವು ಬೇಡಿಕೆಗಳು ರೈಲ್ವೆ ಬಜೆಟ್‌ ಮೂಲಕ ಕೋಲಾರ ಕೋಚ್‌ ಫ್ಯಾಕ್ಟರಿ ಕಾಮಗಾರಿ ಚುರುಕುಗೊಳ್ಳಬೇಕು. ಕೋಲಾರ ನಿಲ್ದಾಣದಲ್ಲಿ ರೈಲ್ವೆ ವ್ಯಾಗನ್‌ ನಿಲುಗಡೆಗೆ ಪ್ರತ್ಯೇಕ ಟ್ರಾಕ್‌ ವ್ಯವಸ್ಥೆಯಾಗಬೇಕು. ಸಿದ್ಧವಾಗಿರುವ ಹುದುಕುಳ ನಿಲ್ದಾಣ ಶೀಘ್ರ ಉದ್ಘಾಟನೆಯಾಗಬೇಕು. ಕೋಲಾರ ಜಿಲ್ಲೆಯಿಂದ ಬೆಂಗಳೂರಿಗೆ ಪ್ರಯಾಣಿಸುವ ಎಲ್ಲಾ ಫ‌ುಷ್‌ಪುಲ್‌ ರೈಲುಗಳನ್ನು ಸಾಮಾನ್ಯ ಬೋಗಿಯ ರೈಲುಗಳಾಗಿ ಪರಿವರ್ತನೆ ಮಾಡಬೇಕು. ನೆನೆಗುದಿಗೆ ಬಿದ್ದಿರುವ ಕೋಲಾರ-ವೈಟ್‌ಫಿಲ್ಡ್‌, ಕೋಲಾರ-ಮುಳಬಾಗಿಲು, ಮುಳಬಾಗಿಲು-ಚಿತ್ತೂರು ರೈಲು ಮಾರ್ಗಗಳ ಜೋಡಣೆ ಚುರುಕಾಗಿ ಆರಂಭವಾಗಬೇಕು.

ಶ್ರೀನಿವಾಸಪುರ-ಸಿಟಿಎಂ ನಿಲ್ದಾಣ ಸಂಪರ್ಕಗೊಳ್ಳಬೇಕು. ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ 2 ಮತ್ತು ಸಂಜೆ 2 ಗಂಟೆ ಕಾಲ ಮಾತ್ರ ಕಾರ್ಯನಿರ್ವಹಿಸುತ್ತಿರುವ ಮುಂಗಡ ಟಿಕೆಟ್‌ ಕೌಂಟರ್‌ನ್ನು ಬೆ.8 ರಿಂದ ಸಂಜೆ 8 ರವರೆಗೂ ತೆರೆಯುವಂತೆ ಮಾಡಬೇಕಾಗಿದೆ ಎಂಬುದು ಜಿಲ್ಲೆಯ ಜನರ ಒಕ್ಕೊರೊಲ ಬೇಡಿಕೆಯಾಗಿದೆ.

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next