Advertisement

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

09:55 PM Oct 06, 2024 | Team Udayavani |

ಬೆಂಗಳೂರು: ಇಂಟರ್‌ ಸಿಟಿಗಳ ನಡುವಿನ ಸಂಪರ್ಕ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬೆಂಗಳೂರು- ಮೈಸೂರು, ಬೆಂಗಳೂರು-ತುಮಕೂರು ಮಾರ್ಗವಾಗಿ “ನಮೋ ಭಾರತ್‌ ರ್‍ಯಾಪಿಡ್‌ ರೈಲು’ ಸಂಚಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿ‌ನ್‌ ವೈಷ್ಣವ್‌ ತಿಳಿಸಿದರು.

Advertisement

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಮರುನವೀಕರಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ ಪತ್ರಕರ್ತರೊಂದಿಗೆ ಮಾತನಾಡಿ, ಬೆಂಗಳೂರು ನಗರದಿಂದ ತುಮಕೂರು, ಮೈಸೂರಿಗೆ ಮೊದಲ ಹಂತವಾಗಿ “ನಮೋ ಭಾರತ್‌ ರ್‍ಯಾಪಿಡ್‌’ ರೈಲು ಸೇವೆ ಪ್ರಾರಂಭಿಸಲಾಗುತ್ತದೆ. ಇದು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅತ್ಯಂತ ವೇಗವಾಗಿ ಸಂಪರ್ಕ ಕಲ್ಪಿಸಲಿದೆ. ಈ ರೈಲು ಸುಮಾರು 150ರಿಂದ 200 ಕಿ.ಮೀ. ವ್ಯಾಪ್ತಿಯೊಳಗೆ ಸಂಚರಿಸಲಿದೆ. ಪ್ರತಿ ನಿತ್ಯ ಉದ್ಯೋಗ ಹಾಗೂ ಇತರೆ ಕೆಲಸಗಳಿಗಾಗಿ ತುಮಕೂರು, ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಅನುಕೂಲ ಕಲ್ಪಿಸಲಿದೆ ಎಂದರು.

ವಿಮಾನ ನಿಲ್ದಾಣಕ್ಕೆ ರೈಲು ಜಾಲ:
ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆ ಬಲಪಡಿಸಲು ರೈಲ್ವೆ ಇಲಾಖೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ ನೈಋತ್ಯ ರೈಲ್ವೇ ಬೆಂಗಳೂರು ನಗರದ ರೈಲ್ವೆ ನಿಲ್ದಾಣದಿಂದ ದೇವನಹಳ್ಳಿವರೆಗೆ ರೈಲು ಸಂಪರ್ಕವಿದೆ. ದೇವನಹಳ್ಳಿಯಿಂದ ವಿಮಾನ ನಿಲ್ದಾಣದ ನಡುವಿನ ಅಂತರವನ್ನು ಕಡಿತಗೊಳಿಸಲು, ನೈಋತ್ಯ ರೈಲ್ವೇ ಬೆಂಗಳೂರು ವಿಭಾಗ ತನ್ನ ರೈಲ್ವೇ ಜಾಲವನ್ನು ವಿಮಾನ ನಿಲ್ದಾಣದ ಸಮೀಪಕ್ಕೆ ವಿಸ್ತರಿಸಲು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಗಳೊಂದಿಗೆ ಶೀಘ್ರದಲ್ಲಿ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದರು.

ವಂದೇ ಭಾರತ್‌ಗೆ ಉತ್ತಮ ಪ್ರತಿಕ್ರಿಯೆ:
ರಾಜ್ಯದಲ್ಲಿ ವಂದೇ ಭಾರತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣಿಕರು ವಂದೇ ಭಾರತ್‌ ರೈಲು ಸಂಚಾರವನ್ನು ಸ್ವೀಕರಿಸಿದ್ದಾರೆ. ಬೆಂಗಳೂರು-ಚೈನ್ನೈ ಸೇರಿ ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತಿರುವ ವಂದೇ ಭಾರತ್‌ ರೈಲಿನಲ್ಲಿ ಶೇ.100ರಷ್ಟು ಸೀಟುಗಳು ಭರ್ತಿಯಾಗುತ್ತಿದೆ. ಇನ್ನೂ ಅಮೃತ್‌ ಭಾರತ್‌ ರೈಲುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೇ ಭಾರತ್‌ ಸ್ಲೀಪರ್‌ ರೈಲುಗಳ ಪ್ರಾಯೋಗಿಕ ಸಂಚಾರವು ಬೆಂಗಳೂರು ಹಾಗೂ ನೋಡ್ಡಾದಲ್ಲಿ ನಡೆಯುತ್ತಿದೆ. ಒಂದು ವರ್ಷದ ಪ್ರಾಯೋಗಿಕ ಪರೀಕ್ಷೆಯ ಬಳಿಕ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ತಯಾರಿಕೆ ಬೃಹತ್‌ ಪ್ರಮಾಣದಲ್ಲಿ ನಡೆಯಲಿದೆ ಎಂದರು.

ಡಿಸೆಂಬರ್‌ಗೆ ಡಿಪಿಆರ್‌ ಮುಕ್ತಾಯ :
ಬೆಂಗಳೂರಿನ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿದ ಭಾರತದ ಅತಿ ದೊಡ್ಡ ವರ್ತುಲ ರೈಲ್ವೆ ಯೋಜನೆಗೆ ಡಿಪಿಆರ್‌ ಸಿದ್ಧಪಡಿಸುವ ಕೆಲಸ ಪ್ರಗತಿಯಲ್ಲಿ ಇದೆ. ಡಿಸೆಂಬರ್‌ ಅಂತ್ಯಕ್ಕೆ ಯೋಜನೆಯ ಡಿಪಿಆರ್‌ ಕೈ ಸೇರಲಿದೆ. ಈ ಯೋಜನೆಯು ಅಸ್ತಿತ್ವದಲ್ಲಿರುವ ಬೆಂಗಳೂರು ಉಪನಗರ ರೈಲು ಯೋಜನೆ ಮತ್ತು ನಮ್ಮ ಮೆಟ್ರೋಗೆ ಪೂರಕವಾಗಿದೆ ಎಂದು ಮಾಹಿತಿ ನೀಡಿದರು.

Advertisement

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ. ಮೋಹನ್‌, ನೈಋತ್ಯ ರೈಲ್ವೇ ಪ್ರದಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಮುಖ್ಯ ಆಡಳಿತಾಧಿಕಾರಿ ಅಜಯ್‌ ಶರ್ಮಾ, ವಿಭಾಗಗಳ ಪ್ರಧಾನ ಮುಖ್ಯಸ್ಥ ಯೋಗೀಶ್‌ ಮೋಹನ್‌ ಮತ್ತು ಇತರ ಅಧಿಕಾರಿಗಳು ಇದ್ದರು.

ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ನವೀಕರಣ
ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೇ ನಿಲ್ದಾಣದ ನವೀಕರಣ ಕಾಮಗಾರಿಯನ್ನು 484.58 ಕೋಟಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ವಿಶ್ವ ದರ್ಜೆಯ ವ್ಯವಸ್ಥೆಯನ್ನು ಕಲ್ಪಿಸಲಿದೆ. 28,023 ಚದರ ಅಡಿಯನ್ನು ಬಳಸಿಕೊಳ್ಳಲಾಗಿದೆ. ಏಕಕಾಲಕ್ಕೆ 250 ದ್ವಿಚಕ್ರ ವಾಹನ ಹಾಗೂ 250 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಸಚಿವ ವೈಷ್ಣವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next