ಹೊಸದಿಲ್ಲಿ : ಉತ್ಕಲ್ ರೈಲು ಹಳಿ ತಪ್ಪಿದ ದುರಂದ ಘಟಿಸಿದ ಬೆನ್ನಿಗೇ ಖಟೋಲಿಯಲ್ಲಿ ಅಮಾನತುಗೊಂಡಿದ್ದ ರೈಲು ಸೇವೆ ಇಂದು ಸೋಮವಾರ ಪುನರಾರಂಭಗೊಂಡಿದೆ. ಈ ಮಾರ್ಗದಲ್ಲಿ ಮೊದಲ ರೈಲು ಇಂದು ನಸುಕಿನ 1.21ರ ಹೊತ್ತಿಗೆ ಇಲ್ಲಿಂದ ನಿರ್ಗಮಿಸಿತೆಂದು ಉತ್ತರ ರೈಲ್ವೆ ತಿಳಿಸಿದೆ.
ಉತ್ಕಲ್ ಎಕ್ಸ್‌ಪ್ರೆಸ್‌ನ 13 ಬೋಗಿಗಳು ಕಳೆದ ಶನಿವಾರ ಹಳಿ ತಪ್ಪಿ 22 ಪ್ರಯಾಣಿಕರನ್ನು ಬಲಿತೆಗೆದುಕೊಂಡು 156 ಮಂದಿ ಗಾಯಗೊಂಡದ್ದನ್ನು ಅನುಸರಿಸಿ ಮೀರತ್-ಮುಜಫರನಗರ-ಸಹರನ್‌ಪುರ ರೈಲು ವಿಭಾಗದಲ್ಲಿ ರೈಲು ಸಂಚಾರ ಅಮಾನತುಗೊಂಡಿತ್ತು.
ಉತ್ಕಲ್ ರೈಲು ಹಳಿತಪ್ಪಿದ ದುರಂತಕ್ಕೆ ನಿರ್ಲಕ್ಷ್ಯದಿಂದಾಗಿ ಕಾರಣರಾದವರ ವಿರುದ್ಧದ ಅಭೂತಪೂರ್ವ ಶಿಸ್ತುಕ್ರಮದ ಭಾಗವಾಗಿ ರೈಲ್ವೇ ಇಲಾಖೆಯು ನಿನ್ನೆ ಮೂವರು ಉನ್ನತ ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು.
ಇವರಲ್ಲಿ ರೈಲ್ವೇ ಮಂಡಳಿಯ ಕಾರ್ಯದರ್ಶಿ ಮಟ್ಟದ ಓರ್ವ ಸದಸ್ಯರೂ ಸೇರಿದ್ದರು. ಮಾತ್ರವಲ್ಲದೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿ ಒಬ್ಬ ಟ್ರ್ಯಾಕ್ ಇಂಜಿನಿಯರ್‌ನನ್ನು ವರ್ಗಾಯಿಸಲಾಗಿತ್ತು.
ಅಮಾನತು ಮಾಡಲ್ಪಟ್ಟಿದ್ದ ನಾಲ್ಕು ಅಧಿಕಾರಿಗಳಲ್ಲಿ ಒಬ್ಬರು ಹಿರಿಯ ವಿಭಾಗೀಯ ಇಂಜಿನಿಯರ್, ಒಬ್ಬರು ಸಹಾಯಕ ಇಂಜಿನಿಯರ್, ಒಬ್ಬರು ಹಿರಿಯ ಸೆಕ್ಷನ್ ಇಂಜಿನಿಯರ್ (ಇವರೆಲ್ಲರೂ ಹಳಿ ನಿರ್ವಹಣೆ ಜವಾಬ್ದಾರಿ ಹೊಂದಿದವರು) ಮತ್ತು ಒಬ್ಬ ಜೂನಿಯರ್ ಇಂಜಿನಿಯರ್.