ಹುಬ್ಬಳ್ಳಿ: ಕಿತ್ತೂರು ಬಳಿ ರೈಲು ಬಿಡಿಭಾಗ ರಫ್ತು ವಲಯ ನಿರ್ಮಿಸಲು ಚಿಂತನೆ ನಡೆದಿದೆ ಎಂದು ಕೇಂದ್ರ ರೈಲ್ವೆ ಸಹಾಯಕ ಸಚಿವ ಸುರೇಶ ಅಂಗಡಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈಲು ಬಿಡಿಭಾಗ ರಫ್ತು ವಲಯಕ್ಕೆ ಪೂರಕವಾದ ಭೂಮಿ ಕಿತ್ತೂರು ಬಳಿಯಿದೆ.
ಸಣ್ಣ ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡಲು ಈ ವಲಯದಲ್ಲಿ ಬಿಡಿ ಭಾಗ ತಯಾರಿಸುವ ಕೈಗಾರಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಈ ಭಾಗದ ನಿರುದ್ಯೋಗಿ ಯುವಕರು ಬದುಕು ರೂಪಿಸಿಕೊಳ್ಳಬಹುದಾಗಿದೆ. ಹುಬ್ಬಳ್ಳಿ- ಧಾರವಾಡ- ಬೆಳಗಾವಿ ನಗರಗಳ ನಡುವೆ ರೈಲು ಸಂಪರ್ಕದಿಂದ ಈ ಭಾಗ ಕೈಗಾರಿಕಾ ಕಾರಿಡಾರ್ ಆಗಲಿದೆ ಎಂದರು.
ದೆಹಲಿಗೆ ಬರಲು ತಿಳಿಸಿದ್ದೇನೆ: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ಕುರಿತು ಸೂಕ್ತ ನಿರ್ಧಾರಕ್ಕೆ ಬರುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದ ಸ್ಪಂದನೆ ಇರಲಿಲ್ಲ. ಯಾರೂ ಈ ಬಗ್ಗೆ ಕಾಳಜಿ ತೋರಲಿಲ್ಲ. ಸಿಎಂ ಯಡಿಯೂರಪ್ಪ ಹಾಗೂ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಕಾಳಜಿ ತೋರಿದ್ದು, ಈ ಕುರಿತು ವಿಸ್ತೃತವಾಗಿ ಚರ್ಚಿಸಲು ದೆಹಲಿಗೆ ಬರಲು ತಿಳಿಸಿದ್ದೇನೆ. ಕೇಂದ್ರ ಮಟ್ಟದ ಸಮಸ್ಯೆಗಳನ್ನು ನಮ್ಮ ಹಂತದಲ್ಲಿ ಬಗೆಹರಿಸುತ್ತೇವೆ. ಸ್ಥಳೀಯ ತೊಂದರೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಕಂಡುಕೊಳ್ಳುವ ಕುರಿತು ಸಭೆ ಕರೆಯಲಾಗಿದೆ ಎಂದರು.
ಭ್ರಷ್ಟಾಚಾರಕ್ಕೆ ಕಡಿವಾಣ: ರೈಲ್ವೆ ನೇಮಕಾತಿಯಲ್ಲಿ ಭ್ರಷ್ಟಾಚಾ ರಕ್ಕೆ ಕಡಿವಾಣ ಹಾಕಲಾಗಿದೆ. ಸಂದರ್ಶನ ರದ್ದುಗೊಳಿಸಿ ಪಾರದರ್ಶಕ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಭಾಗದ ಉದ್ಯೋಗಾ ಕಾಂಕ್ಷಿಗಳಿಗೆ ಅನುಕೂಲವಾಗಲು ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಉಪ ಕಚೇರಿಯನ್ನು ನಗರದಲ್ಲಿ ಆರಂಭಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ಕಚೇರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಇಲಾಖೆ ನೀಡಲಿದೆ. ಬೆಂಗಳೂರು ಕಚೇರಿಯಲ್ಲಿ ನಡೆಯುವ ಎಲ್ಲಾ ಕಾರ್ಯ ಇಲ್ಲಿ ನಡೆಯಲಿವೆ. ರೈಲ್ವೆ ಪರೀಕ್ಷೆಗಳಿಗೆ ಬೇಕಾದ ಮಾಹಿತಿಯನ್ನು ಈ ಕಚೇರಿಯಿಂದ ಪಡೆದುಕೊಳ್ಳಬಹುದು ಎಂದರು.
ಕೆಲವೆಡೆ ನಿಧಾನ: ರೈಲ್ವೆ ಮಾರ್ಗ ಡಬ್ಲಿಂಗ್ ಮತ್ತು ವಿದ್ಯುದೀಕರಣಕ್ಕೆ ಯಾವುದೇ ಸಮಸ್ಯೆಯಿಲ್ಲ. ಹಿಂದಿನ ಸರ್ಕಾರ ಈ ಯೋಜನೆಗೆ ಸರಿಯಾಗಿ ಸ್ಪಂದಿಸದ ಕಾರಣ ರಾಜ್ಯದಲ್ಲಿ ಕೆಲವೆಡೆ ನಿಧಾನವಾಗಿದೆ. ಭೂಮಿ ಹಸ್ತಾಂತರ ಸೇರಿ ಯಾವುದೇ ತೊಂದರೆ ಇಲ್ಲದ ಕಡೆ ವೇಗವಾಗಿ ನಡೆಯುತ್ತಿದೆ. ಇತ್ತೀಚೆಗೆ ಮೈಸೂರು-ಬೆಂಗಳೂರು ಮೆ.ಮೋ. ರೈಲಿಗೆ ಚಾಲನೆ ನೀಡಲಾಗಿದೆ. ಶೀಘ್ರವೇ ಮಂಗಳೂರು- ಬೆಂಗಳೂರು, ಬೀದರ- ಕಲಬುರಗಿ- ಬೆಂಗಳೂರು ರೈಲು ಬಿಡಲು ಚಿಂತನೆ ನಡೆದಿದೆ ಎಂದರು.
ಹುಬ್ಬಳ್ಳಿ-ಬೆಂಗಳೂರು ಪ್ರತ್ಯೇಕ ರೈಲು – ಸೂಚನೆ: ಪ್ರತ್ಯೇಕವಾಗಿ ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಬೇಡಿಕೆ ಬಂದಿರುವುದರಿಂದ ಪ್ರಾಯೋಗಿಕ ಚಾಲನೆ ಮಾಡುವಂತೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸಿದ್ದೇನೆ. 5 ಗಂಟೆಗಳಲ್ಲಿ ಬೆಂಗಳೂರು ತಲುಪಬೇಕು. ಯಾವ ರೈಲುಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂಬುದು ಸೇರಿದಂತೆ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಸೂಚಿಸಿದ್ದೇನೆ ಎಂದು ಸಚಿವ ಅಂಗಡಿ ಹೇಳಿದರು.