ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಹಿಂಪಡೆದು ಎಂಇಎಸ್ ಸಂಘಟನೆ ನಿಷೇಧಿಸಬೇಕು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರೈಲು ತಡೆ ಚಳವಳಿ ಬೆಂಬಲಿಸಿ ನಗರದ ರೈಲ್ವೆ ನಿಲ್ದಾಣದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ರೈಲು ತಡೆ ಚಳವಳಿ ನಡೆಯಿತು.
ಬೆಳಗ್ಗೆ 8 ಗಂಟೆಗೆ ರೈಲ್ವೆ ನಿಲ್ದಾಣದ ಬಳಿಗೆ ಆಗಮಿಸಿದ ಪ್ರತಿಭಟನಾಕಾರರನ್ನು ಒಳ ಹೋಗಲು ಬಿಡದಂತೆ ನಿಲ್ದಾಣದ ಖಾಸ್‌ಬಾಗ್ ರೈಲ್ವೆ ಸೇತುವೆ ಬಳಿಯ ದ್ವಾರದ ಬಳಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆದರು.
ರೈಲು ನಿಲ್ದಾಣದ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ರೈಲು ತಡೆಗೆ ಪೊಲೀಸರು ಅವಕಾಶ ನೀಡಲಿಲ್ಲ,ಸಂಘಟನೆಗಳು, ಪೊಲೀಸರ ನಡುವೆ ನಿಲ್ದಾಣದ ಒಳಹೋಗಲು ತಡೆಯೊಡ್ಡಿದ್ದರಿಂದ ತೀವ್ರ ಚರ್ಚೆ ನಡೆದು ಕನಿಷ್ಠ ನಿಲ್ದಾಣದ ಬಳಿಗೆ ತೆರಳಲು ಅವಕಾಶ ನೀಡಿ ಎಂದು ಒತ್ತಾಯಿಸಿದ್ದರಿಂದ ಕೊನೆಗೆ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿಗೆ ಹೋಗಲು ಅನುವು ಮಾಡಿಕೊಟ್ಟರು. ಸಂಘಟನೆಗಳ ಕಾರ್ಯಕರ್ತರು ದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಟಿ.ಎನ್.ಪ್ರಭುದೇವ್ ಮಾತನಾಡಿ, ಎಂ.ಸಂಜೀವ್ ನಾಯಕ್ ಮೊದಲಾದವರು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ಸುಪ್ರೀಂ ಕೋರ್ಟ್‌ನಲ್ಲಿ ಇನ್ನೂ ವಿಚಾರಣೆಯಲ್ಲಿದೆ. ಆದರೂ, ಬೆಳಗಾವಿ ವಿಚಾರದಲ್ಲಿ ಎಂಇಎಸ್ ಕಾರ್ಯಕರ್ತರು ಪದೇ ಪದೆ ಕ್ಯಾತೆ ಮಾಡುತ್ತಿರುವುದು ಖಂಡನೀಯವೆಂದರು. ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾದರೂ ಕರ್ನಾಟಕದ ಪರ ಯೋಜನೆಗಳ ಜಾರಿಗೆ ಮುಂದಾಗುತ್ತಿಲ್ಲ. ಈ ಬೆನ್ನಲ್ಲೇ ಇತ್ತೀಚೆಗೆ ರಾಜ್ಯ ಸರ್ಕಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವುದು ಖಂಡನೀಯ ಎಂದರು.
ಇದನ್ನೂ ಓದಿ:ವಿಪಕ್ಷದವರು ಏನೇ ಟೀಕೆ ಮಾಡಿದರೂ ನಾವು ಸ್ವಾಗತಿಸುತ್ತೇವೆ: ಬಿ.ಎಸ್.ಯಡಿಯೂರಪ್ಪ
ಕನ್ನಡಪರ ಸಂಘಟನೆಗಳ ಒಕ್ಕೂಟದ ಡಿ.ಪಿ.ಆಂಜನೇಯ, ಸು.ನರಸಿಂಹಮೂರ್ತಿ, ಪು.ಮಹೇಶ್, ಶ್ರೀನಗರ ಬಷೀರ್, ರಮೇಶ್, ಪರಮೇಶ್, ನಾಗರಾಜ, ಗುರುರಾಜು, ನಂಜಪ್ಪ, ಸೂರಿ, ವೆಂಕಟೇಶ್, ಶಿವು, ಕೆ.ಕೆ.ವೆಂಕಟೇಶ್ ಮತ್ತಿತರರಿದ್ದರು.