ರಾಯಗಢ್: ಮಹಾರಾಷ್ಟ್ರದ ರಾಯಗಢ್ ನಲ್ಲಿ ಭಾರಿ ಭೂಕುಸಿತ ಸಂಭವಿಸಿ 27 ಮಂದಿ ಸಾವನ್ನಪ್ಪಿದ ಘಟನೆಯ ನಾಲ್ಕು ದಿನಗಳ ನಂತರ, ರಕ್ಷಣಾ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಭಾನುವಾರ ಹಿಂತೆಗೆದುಕೊಂಡಿದೆ. ಅಧಿಕಾರಿಗಳ ಪ್ರಕಾರ, 78 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ರಕ್ಷಣಾ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಗ್ರಾಮಸ್ಥರ ನಡುವಿನ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳ ಪ್ರಕಾರ, ಶನಿವಾರ ಪತ್ತೆಯಾದ ಕೊನೆಯ ದೇಹವು ಕೊಳೆಯುತ್ತಿರುವಂತೆ ಕಂಡುಬಂದಿದೆ.
ಜಿಲ್ಲಾಡಳಿತದ ಪ್ರಕಾರ, ಪತ್ತೆಯಾಗದ ದೇಹಗಳು ಮತ್ತು ಪ್ರಾಣಿಗಳು ಕೊಳೆಯುತ್ತಿದ್ದು, ಪ್ರದೇಶದಾದ್ಯಂತ ದುರ್ವಾಸನೆ ಹರಡಿದೆ.
ಕೋಟೆಯ ಮೇಲ್ಭಾಗದಲ್ಲಿರುವ ಇರ್ಶಲವಾಡಿ ಗ್ರಾಮದಲ್ಲಿ ಬುಧವಾರ ಭೂಕುಸಿತ ಸಂಭವಿಸಿದೆ. ಗ್ರಾಮವು ದೂರದ ಪ್ರದೇಶದಲ್ಲಿರುವುದರಿಂದ, ರಕ್ಷಣಾ ತಂಡಗಳು ಪ್ರದೇಶವನ್ನು ತಲುಪಲು ಗಂಟೆಗಳ ಕಾಲ ಚಾರಣ ಮಾಡಬೇಕಾಗಿತ್ತು. ಈ ಪ್ರದೇಶದಲ್ಲಿ ಭಾರೀ ಮಳೆಯು ಕಾಣೆಯಾದವರನ್ನು ಹುಡುಕುವ ರಕ್ಷಣಾ ತಂಡಗಳ ಪ್ರಯತ್ನಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿತು.
ಭಾನುವಾರದ ವೇಳೆಗೆ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 27 ಕ್ಕೆ ಏರಿದೆ. ಆದರೆ ಇನ್ನೂ 78 ಮಂದಿ ನಾಪತ್ತೆಯಾಗಿದ್ದಾರೆ.
ದುರಂತದಲ್ಲಿ ಕಳೆದುಹೋದ ಜಮೀನಿನ ಮೌಲ್ಯಮಾಪನವನ್ನು ಕಂದಾಯ ತಂಡ ನಡೆಸುತ್ತಿದ್ದು, ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಲಾಗುವುದು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.