ಮುಂಬೈ:ಕುಸಿದು ಬಿದ್ದಿದ್ದ ಐದು ಅಂತಸ್ತಿನ ಕಟ್ಟಡದ ಅವಶೇಷದಡಿ ಸಿಲುಕಿದ್ದ 5 ವರ್ಷದ ಮಗುವನ್ನು ಸತತ 19 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ರಕ್ಷಿಸಿರುವ ಘಟನೆ ಮಂಗಳವಾರ (ಆಗಸ್ಟ್ 25, 2020) ಮಹಾರಾಷ್ಟ್ರದ ರಾಯ್ ಗಢ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಮೊಹಮ್ಮದ್ ಬಾಂಗಿ ಎಂದು ಗುರುತಿಸಲಾಗಿದೆ. ಅವಶೇಷದಡಿ ಸಿಲುಕಿದ್ದ ಮಗುವನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ಹೊರತೆಗೆದ ನಂತರ ಎನ್ ಡಿಆರ್ ಎಫ್ ಸಿಬ್ಬಂದಿಗಳು ಮಗುವನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿ ವಿವರಿಸಿದೆ.
ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪ್ರಕರಣದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಸುಮಾರು 17 ಮಂದಿ ಅವಶೇಷದಡಿ ಸಿಲುಕಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ಐದು ಅಂತಸ್ತಿನ ಕಟ್ಟಡದಲ್ಲಿ 41 ಫ್ಲ್ಯಾಟ್ಸ್ ಇದ್ದು, 85 ಮಂದಿ ವಾಸವಾಗಿದ್ದರು. ಕಟ್ಟಡ ದಿಧೀರನೇ ಕುಸಿದು ಬೀಳಲು ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದದ್ದು ಕಾರಣವಿರಬಹುದು ಎಂದು ಶಂಕಿಸಲಾಗಿತ್ತು.
ಸೋಮವಾರ ಸಂಜೆ ರಾಯ್ ಗಢ ಜಿಲ್ಲೆಯ ಕಾಜಲ್ ಪುರ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಸುಮಾರು 50 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿತ್ತು.
ಈವರೆಗೆ 60 ಮಂದಿಯನ್ನು ರಕ್ಷಿಸಲಾಗಿದ್ದು ರಾಯ್ ಗಢ ಜಿಲ್ಲೆಯಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶಾಸಕ ಗೋಗಾವಾಲೆ ಹಾಗೂ ಜಿಲ್ಲಾಧಿಕಾರಿ ನಿಧಿ ಚೌಧರಿ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿರುವುದಾಗಿ ವರದಿ ತಿಳಿಸಿತ್ತು.