ಬೆಂಗಳೂರು: ನೂತನ ಪೊಲೀಸ್ ಆಯಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಗುರುವಾರ ನಗರದ ಎಂಟು ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಏಕಕಾಲದಲ್ಲಿ ಸುಮಾರು 1344 ರೌಡಿಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ 9.1 ಕೆ.ಜಿ. ಗಾಂಜಾ, ಮಾರಕಾಸ್ತ್ರಗಳು, 16 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದಲ್ಲಿ 177, ದಕ್ಷಿಣ ವಿಭಾಗದಲ್ಲಿ 175, ಉತ್ತರ ವಿಭಾಗದಲ್ಲಿ 254, ಕೇಂದ್ರ ವಿಭಾಗ 90, ಪೂರ್ವ 207, ಆಗ್ನೇಯ ವಿಭಾಗ 160, ಈಶಾನ್ಯ ವಿಭಾಗದಲ್ಲಿ 156, ವೈಟ್ ಫೀಲ್ಡ್ ವಿಭಾಗದಲ್ಲಿ 125 ರೌಡಿಗಳು ಸೇರಿ ಒಟ್ಟು 1344 ರೌಡಿಗಳ ಮನೆಗಳ ಮೇಲೆ ಮುಂಜಾನೆ 5 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೂ ದಾಳಿ ನಡೆಸಲಾಗಿದೆ.
ಈ ವೇಳೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದ ಮೇಲೆ ಎರಡು ಕಡೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ಹಾಗೂ ಎನ್ ಡಿಪಿಎಸ್ ಕಾಯ್ದೆ ಅಡಿ 3 ಪ್ರಕರಣಗಳು ದಾಖಲಿಸಲಾಗಿದೆ. ಅಲ್ಲದೆ, ಇದೇ ವೇಳೆ ವಿಚಾರಣಾ ಪ್ರಕರಣಗಳಲ್ಲಿ ನ್ಯಾಯಾಲಯ ಗಳಿಂದ ಹೊರಡಿಸಲಾಗಿದ್ದ ರೌಡಿಗಳ ವಿರುದ್ಧದ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದರೂ ತಲೆಮರೆಸಿಕೊಂಡಿದ್ದ 46 ರೌಡಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಗಳಿಗೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಹಿನ್ನೆಲೆ ಸಂಗ್ರಹ: ರೌಡಿಗಳನ್ನು ಠಾಣೆಗಳಿಗೆ ಕರೆದೊಯ್ದು ಪ್ರಸ್ತುತ ಮಾಡುತ್ತಿರುವ ಕೆಲಸ, ಮೊಬೈಲ್ ನಂಬರ್ ಸೇರಿ ಇತರೆ ಮಾಹಿತಿ ಗಳನ್ನು ಪಡೆದುಕೊಂಡು, ಯಾವುದೇ ರೀತಿಯ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಕಾನೂನು ಬಾಹಿರ ಕೆಲಸಗಳಲ್ಲಿ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಲಾಗಿದೆ. ಇತ್ತೀಚೆಗೆ ನೂತನ ಪೊಲೀಸ್ ಆಯುಕ್ತ ಬಿ. ದಯಾನಂದ, ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ನಿಗಾ ಇರಿಸುವಂತೆ ಮತ್ತು ಅಪರಾಧ ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಇರುವವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ರೌಡಿಶೀಟರ್ ಗಳ ಮೇಲೆ ದಾಳಿ ನಡೆಸಲಾಗಿದೆ.
ಮಾರಕಾಸ್ತ್ರ, ಗಾಂಜಾ ಪತ್ತೆ : ದಾಳಿ ವೇಳೆ ಕಾಟನ್‌ಪೇಟೆ ರೌಡಿ ಕುಮರೇಶ್ ಅಲಿಯಾಸ್ ಮಾವತ್ತಿ ಬಳಿ ಕಳ್ಳತನದ ಬೈಕ್ ಮತ್ತು ಮಾರಕಾಸ್ತ್ರಗಳು ಸಿಕ್ಕಿದೆ. ಬಸವೇಶ್ವರ ನಗರದ ಸಣ್ಣೆಗೊರವನಹಳ್ಳಿಯ ರೌಡಿ ಸಂದೀಪ್ ಅಲಿಯಾಸ್ ಧೋಬಿ ಬಳಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ. ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ದರ್ಶನ್ ಅಲಿಯಾಸ್ ಮುರಡಿ ಬಂಧಿಸಲಾಗಿದೆ. ಈತನ ವಿರುದ್ಧ ನ್ಯಾಯಾಲಯ ದಿಂದ ವಾರೆಂಟ್ ಜಾರಿಯಾಗಿತ್ತು. ಕಾಮಾಕ್ಷಿ ಪಾಳ್ಯ ಠಾಣಾ ವ್ಯಾಪ್ತಿಯ ವಿಷ್ಣು ಅಲಿಯಾಸ್ ಕೆಂದಾ, ಲಕ್ಷ್ಮಣ್ ಅಲಿಯಾಸ್ ಲಕ್ಕು ವಿರುದ್ದವು ವಾರೆಂಟ್ ಜಾರಿಯಾಗಿತ್ತು. ಇನ್ನು ಉತ್ತರ ವಿಭಾಗದಲ್ಲಿ 257 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಈ ಪೈಕಿ 183 ಮಂದಿ ಮನೆಯಲ್ಲಿದ್ದು, ಇತರೆ 74 ರೌಡಿಗಳು ಇರಲಿಲ್ಲ. ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.