ರಾಯಚೂರು: ನನೆಗುದಿಗೆ ಬಿದ್ದ ಹತ್ತು ಹಲವು ಯೋಜನೆಗಳ ಜತೆಗೆ ಹೊಸ ಕೊಡುಗೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರ ಕನಸಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್ ತಣ್ಣೀರೆರಚಿದೆ. ಒಂದು ಯೋಜನೆ ಬಿಟ್ಟರೆ ಜಿಲ್ಲೆಗೆ ಹೇಳಿಕೊಳ್ಳುವಂಥ ಯಾವ ಕೊಡುಗೆಯನ್ನು ನಾಡಪ್ರಭು ಕರುಣಿಸಿಲ್ಲ.
ಅಧಿಕಾರಕ್ಕೆ ಬರುತ್ತಿದ್ದಂತೆ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಕರೆಯುವ ಮೂಲಕ ಸಿಎಂ ಪ್ರಗತಿಯ ಪರ್ವಕ್ಕೆ ನಾಂದಿ ಹಾಡುವುದಾಗಿ ತಿಳಿಸಿದ್ದರು. ಆದರೆ, ಅವರು ಮಂಡಿಸಿದ ಬಜೆಟ್ ನೋಡುತ್ತಿದ್ದಂತೆ ಈ ಭಾಗದ ಜನರ ಅಭಿವೃದ್ಧಿಯ ಗೋಪುರ ಮೇಣದಂತೆ ಕರಗಿ ಹೋಯಿತು. ಕನಿಷ್ಠ ಪಕ್ಷ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಿಸಬಹುದು ಎಂಬ ನಿರೀಕ್ಷೆಯೂ ಸುಳ್ಳಾಯಿತು. ಈ ಬಾರಿ ಮತ್ತದೇ 1500 ಕೋಟಿ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಅದು ಬಿಟ್ಟರೆ ಜಿಲ್ಲೆಯ ತಿಂಥಿಣಿ ಬಳಿ ಕೃಷ್ಣಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವುದಾಗಿ ತಿಳಿಸಿದ್ದಾರಾದರೂ ಎಷ್ಟು ಹಣ ಎಂಬುದು ಉಲ್ಲೇಖೀಸಿಲ್ಲ.
ಇನ್ನು ಬಹುದಿನಗಳ ಬೇಡಿಕೆಯಾಗಿದ್ದ ನವಲಿ ಸಮಾನಾಂತರ ಜಲಾಶಯದ ಬೇಡಿಕೆಗೆ ಸ್ಪಂದಿಸಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧಗೊಳಿಸಲು 20 ಕೋಟಿ ನೀಡಿದ್ದಾರೆ. ಆದರೆ, ಇದೇನು ಹೊಸದಲ್ಲ. ಈ ಹಿಂದಿನ ಸರ್ಕಾರ ಇಂಥದ್ದೇ ಪ್ರಸ್ತಾಪ ಮಾಡಿ ಈ ಭಾಗದ ರೈತರ ಮೂಗಿಗೆ ತುಪ್ಪ ಸವರಿತ್ತು. ಅದರ ಬದಲು ಜಲಾಶಯ ನಿರ್ಮಾಣಕ್ಕೆ ಒಂದಷ್ಟು ಮುಂಗಡ ಹಣ ಘೋಷಿಸಿದ್ದರೆ ಜನರಿಗೆ ವಿಶ್ವಾಸವಾದರೂ ಬರುತ್ತಿತ್ತು. ಮಂತ್ರಾಲಯ, ಶ್ರೀಶೈಲದಲ್ಲಿ ಪ್ರವಾಸಿ ಮಂದಿರ ನಿರ್ಮಿಸಲು ಮುಂದಾಗಿರುವುದು ರಾಜ್ಯದ ಭಕ್ತರಿಗೆ ಅನುಕೂಲವಾಗುತ್ತಾದರೂ, ಜಿಲ್ಲೆಯ ಮಟ್ಟಿಗೆ ಅದೇನು ಅತ್ಯಗತ್ಯ ಬೇಡಿಕೆ ಆಗಿರಲಿಲ್ಲ.
ಹಲವು ದಶಕಗಳ ಬೇಡಿಕೆಗಳಾಗಿದ್ದ ಎನ್ ಆರ್‌ಬಿಸಿ ಯೋಜನೆ ವಿಸ್ತರಣೆಗೆ ಆದ್ಯತೆ ಸಿಕ್ಕಿಲ್ಲ. ಮಸ್ಕಿ ಶಾಸಕರ ರಾಜೀನಾಮೆಯಿಂದ ಅಧಿಕಾರಕ್ಕೆ ಬಂದಿದ್ದ ಸರ್ಕಾರ ಆ ಭಾಗದ ಪ್ರಮುಖ ಬೇಡಿಕೆಗೆ ಸ್ಪಂದಿಸದಿರುವುದು ವಿಪರ್ಯಾಸ. ಪ್ರತ್ಯೇಕ ವಿವಿಗೆ ಯಾವುದೇ ಅನುದಾನ ಮೀಸಲಿಡದೆ ಮತ್ತೆ ನನೆಗುದಿಗೆ ಬೀಳುವಂತೆ ಮಾಡಿದೆ.
ರಾಯಚೂರು ಮಹಾನಗರ ಪಾಲಿಕೆ ಬೇಡಿಕೆಗೆ ಸ್ಪಂದಿಸಿಲ್ಲ. ಒಪೆಕ್ ಸ್ವಾಯತ್ತತೆ ಘೋಷಿಸಲಿಲ್ಲ. ರಿಂಗ್ ರಸ್ತೆಗೆ ಅನುದಾನ, ಏರ್‌ಪೋರ್ಟ್‌ಗೆ ಹಣ, ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳದಂಥ ನಾನಾ ಬೇಡಿಕೆಗಳು ಬೇಡಿಕೆಯಾಗಿಯೇ ಉಳಿದಿವೆ.
ಜಲಾಶಯ ಏಕೆ..?: ಈಚೆಗೆ ನೆರೆ ಹಾವಳಿಯಿಂದ ಕೃಷ್ಣ ನದಿಯಲ್ಲಿ ಅಪಾರ ಪ್ರಮಾಣದ ನೀರು ವೃಥಾ ಹರಿದು ಹೋಗಿದೆ. ಆ ನೀರಿನ ಸದ್ಬಳಕೆ ಮಾಡಿಕೊಂಡು ಈ ಭಾಗದ ಜಲಕ್ಷಾಮ ನೀಗಿಸಲು ಐದು ಟಿಎಂಸಿ ನೀರು ಸಂಗ್ರಹದ ಕಿರು ಜಲಾಶಯ ನಿರ್ಮಿಸಲು ಸಿಎಂ ಅಸ್ತು ನೀಡಿದ್ದಾರೆ. ಇದರಿಂದ ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎನ್ನುವುದು ಜನಪ್ರತಿನಿಧಿಗಳ ವಿವರಣೆ.
ಸಿದ್ದಯ್ಯಸ್ವಾಮಿ ಕುಕನೂರು