Advertisement

ಯೋಗಾಭ್ಯಾಸದಿಂದ ಸದೃಢ ಆರೋಗ್ಯ

11:17 AM Jun 20, 2019 | Naveen |

ರಾಯಚೂರು: ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಹೊಂದುವುದರ ಜೊತೆಗೆ ಅನೇಕ ದೈಹಿಕ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ತಹಶೀಲ್ದಾರ್‌ ಡಾ| ಹಂಪಣ್ಣ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಐದನೇ ಅಂತಾರಾಷ್ಟ್ರಿಯ ಯೋಗ ದಿನಾಚರಣೆ ನಿಮಿತ್ತ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯೋಗ ಕೇವಲ ಮಾನಸಿಕ ನೆಮ್ಮದಿಯನ್ನು ಮಾತ್ರ ನೀಡದೆ ದೈಹಿಕ ಸದೃಢತೆಗೂ ನೆರವಾಗಲಿದೆ. ಈಗಾಗಲೇ ಯೋಗದಲ್ಲಿನ ಮಹತ್ವವನ್ನು ಅನೇಕ ಮಹನೀಯರು ಸಾಬೀತು ಮಾಡಿದ್ದಾರೆ. ಅದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ಇಡೀ ವಿಶ್ವವೇ ಯೋಗದಿಂದ ಆಗುವ ಉಪಯೋಗಗಳ ಬಗ್ಗೆ ಅರಿತು ಶರಣಾಗಿದೆ ಎಂದರು.

ಪ್ರತಿ ವರ್ಷ ಜೂನ್‌ 21ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಈ ಬಾರಿ 5ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಯೋಗ ಮತ್ತು ಆಯುರ್ವೇದ ವೈದ್ಯಕೀಯ ವಿಜ್ಞಾನಗಳು ಭಾರತೀಯ ಪರಂಪರೆಯನ್ನು ಜಗತ್ತಿಗೆ ನೀಡಿದ ಅದ್ಭುತ ಕೊಡುಗೆಗಳಾಗಿವೆ. ವಿಶ್ವದ ಸುಮಾರು 185ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಕಚೇರಿಯಿಂದ ಶುರುವಾದ ಜಾಥಾವು ಗಾಂಧಿಚೌಕ್‌, ಮಹಾವೀರ ಚೌಕ್‌, ತೀನ್‌ ಕಂದಿಲ್ ವೃತ್ತದ ಮೂಲಕ ಜಿಲ್ಲಾ ಆಯುಷ್‌ ಕಚೇರಿವರೆಗೆ ನಡೆಸಲಾಯಿತು. ಜಾಥಾದಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಂಕರಗೌಡ ಎಸ್‌.ಪಾಟೀಲ, ಡಾ| ಚಂದ್ರಶೇಖರ ಸುವರ್ಣಗಿರಿ ಮಠ, ಡಾ| ಶಾಕೀರ, ಡಾ| ಹುಲ್ಲೂರು, ಭಾರತೀಯ ಸೇವಾದಳ ರೆಡ್‌ಕ್ರಾಸ್‌ ಸಂಸ್ಥೆ ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next