ರಾಯಚೂರು: ಎಲ್ಲೆಡೆ ಕೋವಿಡ್ ವೈರಸ್ ಭೀತಿ ಇರುವ ಕಾರಣ ಆರನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ರವಿವಾರ ಸರಳವಾಗಿ ಆಚರಿಸಲಾಯಿತು. ವಿವಿಧ ಗಣ್ಯರು ಹಾಗೂ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿಯೇ ಯೋಗಾ ಭ್ಯಾಸ ಮಾಡುವ ಮೂಲಕ ಆಚರಿಸಿದರು. ಪ್ರತಿ ವರ್ಷ ಜಿಲ್ಲಾಡಳಿತವೇ ಕಾರ್ಯಕ್ರಮ ಆಯೋಜಿಸುತ್ತಿತ್ತು. ಆದರೆ, ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಮನೆಯಲ್ಲಿಯೇ ಯೋಗ ದಿನ ಆಚರಿಸಲಾಯಿತು.
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮನೆಯಲ್ಲೇ ವಿವಿಧ ಯೋಗಾಸನಗಳನ್ನು ಮಾಡಿದರು. ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅವರು ಪತಿ, ಮಕ್ಕಳೊಂದಿಗೆ ಯೋಗಾಭ್ಯಾಸ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಕರ್ತರು ಯೋಗಾಭ್ಯಾಸ ಮಾಡುವ ಮೂಲಕ ಯೋಗ ದಿನ ಆಚರಿಸಿದರು. ಇನ್ನು ವಿವಿಧ ಶಾಲಾ ಕಾಲೇಜುಗಳಲ್ಲಿ ರವಿವಾರವಾದರೂ ಯೋಗ ದಿನ ಆಚರಿಸಲಾಯಿತು.
ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶ್ವ ಯೋಗ ದಿನ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ, ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಬದುಕಿನ ಕೊನೆಯವರೆಗೂ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ನಾವು ಆರೋಗ್ಯ ಮತ್ತು ಸದೃಢವಾಗಿರಲು ಸಾಧ್ಯ ಎಂದರು. ನಾನು 20 ವರ್ಷದಿಂದ ಪ್ರತಿ ನಿತ್ಯ ಯೋಗಭ್ಯಾಸ ಮಾಡುತ್ತಿದ್ದೇನೆ. ಅದರಿಂದ ಮಾನಸಿಕ ಹಾಗೂ ಶಾರೀರಿಕವಾಗಿ ಸದೃಢವಾಗಿದ್ದು, ಕರ್ತವ್ಯ ನಿರ್ವಹಣೆಗೆ ಹೆಚ್ಚಿನ ಉತ್ಸಾಹ ಮೂಡುತ್ತಿದೆ. ಎಲ್ಲರೂ ಪ್ರತಿದಿನ ಯೋಗಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಪರಮಾನಂದ ಪಿ.ಘೋಡ್ಕೆ, ಕೇದಾರನಾಥ, ಯೋಗ ಗುರುಗಳಾದ ಡಾ| ತಿಮ್ಮಪ್ಪ ವಡ್ಡೆಪಲ್ಲಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.