Advertisement

ಜಿಲ್ಲಾದ್ಯಂತ ಯೋಗ ದಿನಾಚರಣೆ

10:36 AM Jun 22, 2019 | Naveen |

ರಾಯಚೂರು: ಇಡೀ ವಿಶ್ವವೇ ಆಚರಿಸುತ್ತಿರುವ ಐದನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಜಿಲ್ಲೆಯಲ್ಲೂ ಬಲು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯೂಷ್‌ ಇಲಾಖೆ ಹಾಗೂ ಆರ್ಟ್‌ ಆಫ್‌ ಲಿವಿಂಗ್‌ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರೆ, ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜಗಳಲ್ಲೂ ಯೋಗ ದಿನ ಆಚರಿಸಲಾಯಿತು.

Advertisement

ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸುಮಾರು 500ಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.

ಬೆಳಗ್ಗೆ 6:30ರ ಸುಮಾರಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಮಾರು ಅರ್ಧ ಗಂಟೆ ಧ್ಯಾನ ನಡೆಸಿದ ಬಳಿಕ, ಸುಮಾರು 45 ನಿಮಿಷಗಳ ಕಾಲ ವಿವಿಧ ಆಸನಗಳು, ವ್ಯಾಯಾಮಗಳ ಮೂಲಕ ಯೋಗಾಭ್ಯಾಸ ಮಾಡಲಾಯಿತು. ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರದ ಶಿವಯೋಗಿ ಮತ್ತು ರಾಧಾ ಮಾರ್ಗದರ್ಶನದಲ್ಲಿ ಡಿಸಿ, ಎಸ್‌ಪಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಯೋಗಾಭ್ಯಾಸ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜಿಪಂ ಅಧ್ಯಕ್ಷ ಆದಿಮನಿ ವೀರಲಕ್ಷ್ಮೀ, ಯೋಗದಲ್ಲಿ ಆರೋಗ್ಯದ ಗುಟ್ಟು ಅಡಗಿದೆ. ನಿತ್ಯ ಯೋಗ ಸಾಧನೆ ಮಾಡುವುದರಿಂದ ಸದೃಢ ಆರೋಗ್ಯ ಹೊಂದಬಹುದು. ಯೋಗದಿಂದ ದೇಹ ಉತ್ಸಾಹ ಭರಿತವಾಗಲಿದ್ದು, ಮುಖದಲ್ಲಿ ಚೈತನ್ಯ ಹೆಚ್ಚುತ್ತದೆ. ಆದರೆ, ಕೇವಲ ವರ್ಷಕ್ಕೆ ಒಂದು ದಿನ ನೆಪ ಮಾತ್ರಕ್ಕೆ ಯೋಗ ಮಾಡಿ ಇಂಥ ಕಾರ್ಯಕ್ರಮ ಆಚರಿಸಬಾರದು. ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿ, ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮವಾಗಿರದೆ ಚಿತ್ತ ಕೇಂದ್ರಿಕೃತ ಸಾಧನವೂ ಹೌದು. ಯೋಗದಿಂದ ಏಕಾಗ್ರತೆ ಹೊಂದಲು ಸಾಧ್ಯ. ವ್ಯಕ್ತಿ ಮನಸ್ಸು, ದೇಹ, ಆತ್ಮಗಳ ಏಕತೆ ಇದರಿಂದ ಸಾಧ್ಯವಾಗಲಿದೆ. ಜೀಮ್‌ ಮಾಡುವುದರಿಂದ ದೇಹ ಕಟ್ಟುಮಸ್ತಾಗಬಹುದು. ಆದರೆ, ಅದರಿಂದ ಅಪಾಯವೂ ಇದೆ. ಯೋಗದಿಂದ ಕಣ್ಣಿಗೆ ಕಾಣದ ರೀತಿಯಲ್ಲಿ ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ. ಅದರಿಂದ ಮನುಷ್ಯ ದಿರ್ಘಾವಧಿಯವರೆಗೆ ಆರೋಗ್ಯದಿಂದ ಇರಬಲ್ಲ ಎಂದು ಹೇಳಿದರು.

Advertisement

ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ. ವೇದಮೂರ್ತಿ ಮಾತನಾಡಿ, ಇಡೀ ಜಗತ್ತಿಗೆ ಯೋಗ ಪರಿಚಯಿಸಿರುವುದು ನಮ್ಮ ದೇಶ ಎಂಬುದು ಹೆಮ್ಮೆಯ ವಿಚಾರ. ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು. ಉತ್ತಮ ಆರೋಗ್ಯ ಇದ್ದರೆ ಮಾತ್ರ ನಾವು ಏನಾದರೂ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾಲ ಕಾಲಕ್ಕೆ ನಿಯಮಿತ ಆಹಾರ ಸೇವನೆ, ಯೋಗ, ವ್ಯಾಯಾಮ ಮಾಡಬೇಕು. ಇದರಿಂದ ಒತ್ತಡ ಕಡಿಮೆಯಾಗಲಿದೆ. ಯಾವ ವಯೋಮಾನದವರಾದರೂ ಯೋಗ ಮಾಡಬಹುದು. ನಾನು ಕಳೆದ 25 ವರ್ಷಗಳಿಂದ ಯೋಗ ಮಾಡುತ್ತಿದ್ದೇನೆ ಎಂದು ಹೇಳಿದರು.

ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ನೆಹರು ಯುವ ಕೇಂದ್ರದಿಂದ ಬಹುಮಾನ ವಿತರಿಸಲಾಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅಕ್ಕ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಂಕರಗೌಡ ಎಸ್‌. ಪಾಟೀಲ, ಜಿಲ್ಲಾ ಹೆಚ್ಚುವರಿ ಪೋಲಿಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಾ| ಚಂದ್ರಶೇಖರ ಸುವರ್ಣಗಿರಿಮಠ ಮತ್ತು ಇತರ ಅಧಿಕಾರಿಗಳು ಸೇರಿ ವಿವಿಧ ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸಂಜೀವಿನಿ ವಾಕಿಂಗ್‌ ಕ್ಲಬ್‌: ಮಾವಿನ ಕೆರೆ ಉದ್ಯಾನವನದಲ್ಲಿ ಸಂಜೀವಿನಿ ವಾಕಿಂಗ್‌ ಕ್ಲಬ್‌ನಿಂದ ಯೋಗ ದಿನ ಆಚರಿಸಲಾಯಿತು. ಬೆಳಗ್ಗೆ 5:00ರಿಂದ 7:00ರ ವರೆಗೆ ಯೋಗಾಭ್ಯಾಸ ಮಾಡಲಾಯಿತು. ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸೋಮವಾರ ಪೇಟೆ ಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇದು ಸುದಿನ. ಜಗತ್ತಿಗೆ ಭಾರತ ನೀಡಿದ ಕೊಡುಗೆಗಳಲ್ಲಿ ಒಂದಾದ ಯೋಗವನ್ನು ಇಡೀ ವಿಶ್ವವೇ ಆಚರಿಸುತ್ತಿದೆ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ. ಮನಸ್ಸು ಹಾಗೂ ದೇಹದ ಸದೃಢತೆಗೆ ಯೋಗ ಅತ್ಯಂತ ಪ್ರಮುಖ ಅಂಶವಾಗಿದೆ. ಎಲ್ಲರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಹೇಳಿದರು.

ನಗರಸಭೆ ಸದಸ್ಯ ಬಿ. ರಮೇಶ ಮಾತನಾಡಿ, ಮಾವಿನಕೆರೆಗೆ ನಿತ್ಯ ಸಾಕಷ್ಟು ಜನರು ವಾಯುವಿಹಾರಕ್ಕೆ ಬರುತ್ತಾರೆ. ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಕ್ಲಬ್‌ ಅಧ್ಯಕ್ಷ ಯು. ಆಂಜನೇಯ ಅಧ್ಯಕ್ಷತೆ ವಹಿಸಿದ್ದರು. ಯೋಗ ಶಿಕ್ಷಕರಾದ ರಾಜು, ವೀರಭದ್ರಪ್ಪ ಮಟಮಾರಿ ಯೋಗಾಭ್ಯಾಸ ಮಾಡಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ನಾಗೇಶ, ಖಜಾಂಚಿ ಎನ್‌.ಸುರೇಶ, ಹಿರಿಯ ಸಲಹೆಗಾರ ಕೆ. ಕಂಡಪ್ಪ ಮಾಮಲೂರು, ಬಸವರಾಜ ಅಚ್ಚೊಳ್ಳಿ, ಎಂ .ಸೂಗಪ್ಪ ನಾರಾಯಣ, ಎಲ್.ಜಿ. ಶಿವಕುಮಾರ, ಸಂಗಮೇಶ ಮಂಗಾನವರ್‌, ಉಪಾಧ್ಯಕ್ಷರಾದ ಆರ್‌ ಲಕ್ಷ್ಮಿಪತಿ, ಟಿ. ವಿಠ್ಠಲರಾವ್‌, ಭೀಮಣ್ಣ, ನೀಲಕಂಠರಾವ್‌ ಎಂ. ಸೂಗಪ್ಪ ವಕೀಲರು, ಚಂದ್ರಶೇಖರ, ಮಲ್ಲಿಕಾರ್ಜುನ ಸ್ವಾಮಿ, ಸಣ್ಣಮಲ್ಲು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next