ರಾಯಚೂರು: ಗಡಿಭಾಗದ ಸಮಗ್ರ ಅಭಿವೃದ್ಧಿ ಆಗಬೇಕಾದರೆ, ಈ ಭಾಗದಲ್ಲಿ ಸರ್ಕಾರದ ಅನುದಾನ ಮತ್ತು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಯರಗೇರಾ ತಾಲೂಕು ಕೇಂದ್ರ ರಚನೆ ಆಗಬೇಕು ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಮ್ ನಾಯಕ್ ಅಭಿಪ್ರಾಯಪಟ್ಟರು.
ತಾಲೂಕಿನ ಯರಗೇರಾ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಯರಗೇರಾ ತಾಲೂಕು ಹೋರಾಟ ಸಮಿತಿ ರಚನೆ ಕುರಿತು ರವಿವಾರ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಭಾಗದ ಹಳ್ಳಿಗಳ ಜನ ಯಾವುದೇ ಕೆಲಸ ಕಾರ್ಯಗಳಿಗೂ ರಾಯಚೂರು ತಾಲೂಕಿಗೆ ಹೋಗಬೇಕು. ಆದರೆ, ಸೂಕ್ತ ಸಾರಿಗೆ ಸೌಕರ್ಯವಿರದ ಕಾರಣ ನಗರಕ್ಕೆ ಬರಲು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೇ, ಈ ಪ್ರದೇಶ ಆಂಧ್ರಪ್ರದೇಶದ ಗಡಿ ಭಾಗವಾಗಿದ್ದು, ಕನ್ನಡ ಭಾಷೆಗೆ ಸಾಕಷ್ಟು ತೊಡಕುಗಳಿವೆ. ಗ್ರಾಮಗಳ ಅಭಿವೃದ್ಧಿಗೆ ಯರಗೇರಾ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿಸುವುದು ಅತ್ಯವಶ್ಯಕ ಎಂದರು.
ಮುಖಂಡ ನಿಜಾಮುದ್ದೀನ್ ಮಾತನಾಡಿ, ಈಗಾಗಲೇ ತಾಲೂಕಿನ ಅವಶ್ಯಕತೆ ಬಗ್ಗೆ ಜನರಿಗೆ ಮಾಹಿತಿ ಮತ್ತು ಜಾಗೃತಿ ನೀಡಲಾಗುತ್ತಿದೆ. ಎಲ್ಲ ಗ್ರಾಮ ಪಂಚಾಯಿತಿಗಳ ಸಭೆಗಳಲ್ಲಿ ಯರಗೇರಾ ತಾಲೂಕು ಕೇಂದ್ರ ಮಾಡುವಂತೆ ನಿರ್ಣಯ ಕೈಗೊಳ್ಳುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸಚಿವರಿಗೆ, ಶಾಸಕರಿಗೆ ಮತ್ತು ಸಂಸದರಿಗೆ ಮನವಿ ನೀಡಿ ಒತ್ತಾಯಿಸಲಾಗುವುದು. ತಾಲೂಕು ರಚನೆಗಾಗಿ ಪಕ್ಷಭೇದ ಮರೆತು ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
ವಿವಿಧ ಗ್ರಾಮಗಳ ಮುಖಂಡರಾದ ಮೆಹಬೂಬ್ ಪಟೇಲ, ಕೃಷ್ಣಾಜಿ, ಜನಾರ್ದನ ರೆಡ್ಡಿ, ಬಸಣ್ಣ ಉಪ್ಪಾಳ, ಮಲ್ಲಿಕಾರ್ಜುನ ಗೌಡ, ವೆಂಕಟೇಶ ನಾಯಕ, ನಲ್ಲರೆಡ್ಡಿ ನಾಯಕ, ಈರಣ್ಣ ನಾಯಕ, ವಿದ್ಯಾನಂದ ರೆಡ್ಡಿ, ಬಸವರಾಜ, ಲಕ್ಷ್ಮೀಪತಿ, ಮಹ್ಮದ್ ರಫಿ, ಸುಬ್ರಹ್ಮಣ್ಯ, ಮೂಕಪ್ಪ ನಾಯಕ, ಹಾಜಿ ಮಲಂಗ್, ಸೈಯ್ಯದ್ ಬುರಾನ, ಬಜಾರಪ್ಪ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.