ರಾಯಚೂರು: ಮಹಿಳಾ ಶೋಷಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರದಲ್ಲಿ ಪ್ರತ್ಯೇಕ ಮಹಿಳಾ ಠಾಣೆ ಆರಂಭಿಸಲಾಗಿದೆ. ಆದರೆ, ಠಾಣೆಯಲ್ಲಿ ಅರ್ಧಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಕಾರಣ ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿಯ ಸಬಲೀಕರಣ ಆಗದಂತಾಗಿರುವುದು ವಿಪರ್ಯಾಸ.
ನಗರದ ಸದರ್ ಬಜಾರ್ ಠಾಣೆಯಲ್ಲಿ ಮಹಿಳಾ ಠಾಣೆ ಆರಂಭಿಸಿದ್ದು, ಮಹಿಳೆಯರಿಗೆ ಸಂಬಂಧಿಸಿದ ಬಹುತೇಕ ದೂರುಗಳನ್ನು ಇಲ್ಲಿಗೆ ಕಳುಹಿಸಲಾಗುತ್ತಿದೆ. ಆದರೆ, ಠಾಣೆಯಲ್ಲಿ ಅಗತ್ಯದಷ್ಟು ಸಿಬ್ಬಂದಿಯೇ ಇಲ್ಲದ ಕಾರಣ ಇರುವ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗುತ್ತಿದೆ. ಇದರಿಂದ ಕಷ್ಟವಾದರೂ ವಿಧಿ ಇಲ್ಲದೇ ಸಿಬ್ಬಂದಿ ಕೆಲಸ ನಿರ್ವಹಿಸುವಂತಾಗಿದೆ.
ಈ ಠಾಣೆಗೆ ಒಟ್ಟು 46 ಹುದ್ದೆಗಳು ಮಂಜೂರಾಗಿದ್ದು, ಈಗ 28 ಮಾತ್ರ ಭರ್ತಿಯಾಗಿವೆ. ಅದರಲ್ಲೂ 6 ಸಿಬ್ಬಂದಿ ಬೇರೆಡೆಗೆ ತಾತ್ಕಾಲಿಕ ವರ್ಗಾವಣೆ ಪಡೆದಿದ್ದು, ಈಗ ಕೇವಲ 22 ಜನ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಇರುವ ಸಿಬ್ಬಂದಿಯಲ್ಲೇ ಎಲ್ಲ ಕೆಲಸಗಳನ್ನು ನಿಭಾಯಿಸುವ ಸ್ಥಿತಿ ಎದುರಾಗಿದೆ. ಒಂದು ಪಿಐ ಹುದ್ದೆ ಮಂಜೂರಾಗಿದ್ದು, ಭರ್ತಿಯಾಗಿದೆ. ಪಿಎಸ್‌ಐ ಹುದ್ದೆ ಖಾಲಿ ಇದೆ. ಎರಡು ಎಎಸ್‌ಐ ಹುದ್ದೆಗಳು ಮಂಜೂರಾಗಿದ್ದು, ಭರ್ತಿಯಾಗಿದ್ದರೆ, 10 ಮುಖ್ಯ ಪೇದೆ ಹುದ್ದೆ ಮಂಜೂರಾಗಿದ್ದು, ಅವು ಭರ್ತಿಯಾಗಿವೆ. ಆದರೆ, ಅದರಲ್ಲಿ ಇಬ್ಬರು ತಾತ್ಕಾಲಿಕ ವರ್ಗಾವಣೆ ಪಡೆದಿದ್ದಾರೆ. 30 ಪೇದೆಗಳಲ್ಲಿ ಈಗ 15 ಜನ ಮಾತ್ರ ಇದ್ದಾರೆ. ಅದರಲ್ಲೂ ಕೆಲವರು ತಾತ್ಕಾಲಿಕ ವರ್ಗಾವಣೆ ಪಡೆದಿದ್ದಾರೆ. ಇನ್ನೂ ಎರಡು ಎಪಿಸಿ ಹುದ್ದೆಗಳು ಖಾಲಿ ಇವೆ.
ಕಾಯಂ ಪಿಎಸ್‌ಐ ಇಲ್ಲ: ಠಾಣೆ ಆರಂಭವಾದಾಗಿನಿಂದ ಈವರೆಗೂ ಠಾಣೆಗೆ ಹೆಚ್ಚು ದಿನ ಪಿಎಸ್‌ಐ ಉಳಿಯುತ್ತಿಲ್ಲ. ಕೆಲಸದ ಒತ್ತಡವೋ, ಬೇರೆ ಯಾವ ಕಾರಣಕ್ಕೋ ಇಲ್ಲಿಗೆ ಬಂದ ಪಿಎಸ್‌ಐಗಳು ಕೆಲವೇ ದಿನಗಳಿಗೆ ಬೇರೆ ಠಾಣೆಗಳಿಗೆ ವರ್ಗಾವಣೆ ಪಡೆಯುತ್ತಿದ್ದಾರೆ. ಯಾರೊಬ್ಬರು ಕೂಡ ಒಂದು ವರ್ಷ ಪೂರ್ಣಾವಧಿಯಾಗಿ ಕೆಲಸ ಮಾಡಿದ ನಿದರ್ಶನಗಳಿಲ್ಲ. ಈಗಲೂ ಠಾಣೆಯಲ್ಲಿ ಪಿಎಸ್‌ಐ ಹುದ್ದೆ ಖಾಲಿಯಾಗಿಯೇ ಇದೆ.
ಕೆಲಸದ ಒತ್ತಡ: ನಗರದ ಯಾವುದೇ ಠಾಣೆಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ದೂರುಗಳು ಬಂದರೂ ಇಲ್ಲಿಗೇ ಕಳುಹಿಸಲಾಗುತ್ತಿದೆ. ಇದರಿಂದ ಠಾಣೆಯಲ್ಲಿ ಬಿಡುವಿಲ್ಲದ ಕೆಲಸವಿದೆ. ಅದರ ಜತೆಗೆ ಯಾವುದೇ ಜಾತ್ರೆ, ಗಲಾಟೆ, ವಿಶೇಷ ಕಾರ್ಯಕ್ರಮಗಳ ಬಂದೋಬಸ್ತ್ಗೆ ತೆರಳಲು ಮಹಿಳಾ ಸಿಬ್ಬಂದಿಯನ್ನು ಇಲ್ಲಿಂದಲೇ ಪಡೆಯಲಾಗುತ್ತಿದೆ. ದೂರುಗಳಿಗೆ ಸಂಬಂಧಿಸಿ ಆರೋಪಿಗಳನ್ನು ವಶಕ್ಕೆ ಪಡೆಯುವುದು, ಪಂಚನಾಮೆ ಮಾಡಲು ಬೇರೆ ಬೇರೆ ಜಿಲ್ಲೆಗಳಿಗೆ ಇಲ್ಲಿಯ ಸಿಬ್ಬಂದಿಯೇ ತೆರಳಬೇಕಿದೆ. ಇಷ್ಟೆಲ್ಲ ಕೆಲಸಗಳು ಸಿಬ್ಬಂದಿಯನ್ನು ಒತ್ತಡಕ್ಕೆ ಸಿಲುಕಿಸಿವೆ. ಇರುವ ಸಿಬ್ಬಂದಿಯಲ್ಲಿ ಯಾರಾದರೂ ರಜೆ, ವಾರದ ರಜೆ ಪಡೆದರೆ ಕೆಲಸದ ತೀವ್ರತೆ ಮತ್ತಷ್ಟು ಹೆಚ್ಚಲಿದೆ.
ಜವಾಬ್ದಾರಿ ಹಸ್ತಾಂತರ: ಮಹಿಳೆಯರಿಗೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳನ್ನು ಸ್ಥಳೀಯ ಠಾಣೆಗೆ ತಂದಾಗ ಅಲ್ಲಿನ ಅಧಿಕಾರಿಗಳು ನೇರವಾಗಿ ಮಹಿಳಾ ಠಾಣೆಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕೆಲವೊಂದು ಸಮಸ್ಯೆಗಳನ್ನು ಸ್ಥಳೀಯವಾಗಿ ಇತ್ಯರ್ಥಗೊಳಿಸಲು ಅವಕಾಶವಿದ್ದರೂ ಮಾಡುತ್ತಿಲ್ಲ. ಇದರಿಂದ ಮಹಿಳಾ ಠಾಣೆಗೆ ಹೊರೆ ಹೆಚ್ಚುತ್ತಿದೆ.
ಒಟ್ಟಾರೆ ಮಹಿಳೆಯರ ಸಬಲೀಕರಣಕ್ಕೆಂದು ಆರಂಭಿಸಿದ ಠಾಣೆಗೆ ಸಿಬ್ಬಂದಿ ಸಮಸ್ಯೆ ಕಾಡುತ್ತಿರುವುದು ಸತ್ಯ. ತಾವೇ ಸಬಲರಾಗದ ಮಹಿಳಾ ಸಿಬ್ಬಂದಿಯಿಂದ ಬೇರೆ ಮಹಿಳೆಯರಿಗೆ ಎಷ್ಟರ ಮಟ್ಟಿಗೆ ನ್ಯಾಯ ಸಿಗಬಲ್ಲದು ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಈಗಾಗಲೇ ಠಾಣೆಗೆ ಕೆಲ ಸಿಬ್ಬಂದಿಯನ್ನು ನಿಯೋಜಿಸಿ ಸಮಸ್ಯೆ ನಿವಾರಣೆಗೆ ಒತ್ತು ನೀಡಲಾಗಿದೆ. ಜಿಲ್ಲೆಗೆ ಶೀಘ್ರದಲ್ಲೇ 220 ಪೊಲೀಸರ ನೇಮಕ ಮಾಡಲಾಗುತ್ತಿದೆ. ಆಗ ಸಿಬ್ಬಂದಿ ಕೊರತೆ ನೀಗಿಸಲಾಗುವುದು. ಮೇಲಧಿಕಾರಿಗಳ ಜತೆ ಮಾತನಾಡಿದ್ದು, ಪಿಎಸ್‌ಐ ನಿಯೋಜಿಸುವಂತೆ ಕೇಳಲಾಗಿದೆ. ಜಿಲ್ಲೆಯ ಎಲ್ಲ ಠಾಣೆಗಳಿಂದ ಅಲ್ಲಿಗೆ ದೂರುಗಳು ಬರುತ್ತಿಲ್ಲ. ನಗರ ಮತ್ತು ಸ್ಥಳೀಯ ಠಾಣೆಗಳಿಗೆ ಬರುವ ಮಹಿಳಾ ದೂರುಗಳನ್ನಷ್ಟೇ ಅಲ್ಲಿಗೆ ರವಾನಿಸಲಾಗುತ್ತಿದೆ.
•
ಡಾ| ಸಿ.ಬಿ.ವೇದಮೂರ್ತಿ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ