ರಾಯಚೂರು: ಸಾಧಿಸುವ ಛಲವಿದ್ದರೇ ಏನನ್ನಾದರೂ ಸಾಧಿಸಿ ತೋರಬಹುದು ಎನ್ನಲಿಕ್ಕೆ ಉತ್ತಮ ನಿದರ್ಶನ ಈ ವಿದ್ಯಾರ್ಥಿನಿ. ಬಡತನದ ಹಿನ್ನೆಲೆಯಿಂದ ಬಂದರೂ ನಾಲ್ಕು ಚಿನ್ನದ ಪಡೆಯುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಈಚೆಗೆ ನಡೆದ 9ನೇ ಘಟಿಕೋತ್ಸವದಲ್ಲಿ ಅಗ್ರಿಕಲ್ಚರ್ ಇಂಜಿನಿಯರಿಂಗ್ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶ್ರೀಪ್ರಿಯಾಂಕಾ ಎಸ್. ನಲ್ಲ ಗಮನ ಸೆಳೆದರು. ಬಿಟೆಕ್ ಅಗ್ರಿ ಇಂಜಿನಿಯರಿಂಗ್‌ನಲ್ಲಿ ಉತ್ತಮ ಶ್ರೇಯಾಂಕ ಪಡೆದಿದ್ದಕ್ಕೆ ಈ ಪದಕಗಳು ಲಭಿಸಿದರೆ, ಹೆಚ್ಚು ಗರಿಷ್ಠ ಅಂಕ ಪಡೆದಿದ್ದಕ್ಕೆ ಎರಡು ನಗದು ಬಹುಮಾನ ಕೂಡ ಪಡೆದರು. ಘಟಿಕೋತ್ಸವದಲ್ಲಿ ಕೃಷಿ ವಿವಿ ಕುಲಾಧಿಪತಿ ಹಾಗೂ ಕೃಷಿ ಖಾತೆ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಪದವಿ ಪ್ರದಾನ ಮಾಡಿದರು.
ತಂದೆ ಶ್ರೀನಿವಾಸ ಗಂಗಾವತಿ ಶ್ರೀರಾಮನಗರದಲ್ಲಿ ಟ್ಯಾಕ್ಸಿ ಚಲಾಯಿಸುತ್ತಿದ್ದು, ತಾಯಿ ಜಾನ್ಸಿ ಗೃಹಿಣಿಯಾಗಿದ್ದಾರೆ. ತನ್ನ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಶ್ರೀಪ್ರಿಯಾಂಕಾ, ಸತತ ಅಧ್ಯಯನ, ಕಠಿಣ ಪರಿಶ್ರಮವೇ ನನ್ನ ಈ ಸಾಧನೆಗೆ ಕಾರಣ. ಮುಂದೆ ಕೃಷಿಯಲ್ಲಿ ನೈಸರ್ಗಿಕ ಮತ್ತು ರೈತಸ್ನೇಹಿ ತಳಿಗಳ ಆವಿಷ್ಕಾರ ಕುರಿತು ಸಂಶೋಧನೆ ನಡೆಸಿ, ಕೃಷಿ ಸಂಶೋಧನಾ ವಿಜ್ಞಾನಿ ಆಗುವ ಹೆಬ್ಬಯಕೆ ಹೊಂದಿದ್ದೇನೆ. ನನ್ನ ಈ ಸಾಧನೆಗೆ ಪೋಷಕರ ಶ್ರಮ ಮತ್ತು ಸಹಕಾರವೇ ಕಾರಣವಾಗಿದ್ದು, ಅವರಿಗೆ ನಾನು ಆಭಾರಿ ಎನ್ನುವುದನ್ನು ಅವರು ಮರೆಯಲಿಲ್ಲ. ಪಾಲಕರು ಕೂಡ ಮಗಳ ಸಾಧನೆ, ಅಧ್ಯಯನದಲ್ಲಿನ ಬದ್ಧತೆ ಬಗ್ಗೆ ಅಪಾರ ಅಭಿಮಾನ ವ್ಯಕ್ತಪಡಿಸಿದರು.
ಇನ್ನೂ ರಾಯಚೂರು ಅಗ್ರಿಕಲ್ಚರಲ್ ಕಾಲೇಜಿನ ಬಿಎಸ್‌ಸಿ ಅಗ್ರಿ ಪದವಿ ವಿದ್ಯಾರ್ಥಿ ಚನ್ನಬಸವ ಕೂಡ ನಾಲ್ಕು ಚಿನ್ನದ ಪದಕ ಪಡೆದು ಗಮನ ಸೆಳೆದರು. ಕೊಪ್ಪಳ ಜಿಲ್ಲೆ ಕೊಡದಾಳ ಮೂಲದ ಅವರ ತಂದೆ ಸಂಗಪ್ಪ ವಟಪರ್ವಿ ಶಿಕ್ಷಕರಾಗಿದ್ದಾರೆ. ತಾಯಿ ಉಮಾಮಹೇಶ್ವರಿ ಗೃಹಿಣಿಯಾಗಿದ್ದಾರೆ. ಹೆತ್ತವರ ಸೂಚನೆಯಂತೆ ಕಷ್ಟಪಟ್ಟು ಓದಿದ್ದಕ್ಕೆ ಚಿನ್ನದ ಪದಕ ಲಭಿಸಿದೆ. ಇದು ಸಾಕಷ್ಟು ಖುಷಿ ಕೊಟ್ಟಿದೆ. ಆಹಾರ ಉತ್ಪಾದನೆ ಮತ್ತು ಕೃಷಿಯಲ್ಲಿ ಉತ್ತಮ ತಳಿಗಳ ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಇಂಗಿತ ವ್ಯಕ್ತಪಡಿಸುತ್ತಾರೆ ಚನ್ನಬಸವ. ದೇಶದ ಜನಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ಪೌಷ್ಟಿಕ ಆಹಾರ ಉತ್ಪಾದನೆ ಹೆಚ್ಚಾಗಬೇಕಿದೆ. ಆ ದಿಸೆಯಲ್ಲಿ ಸಂಶೋಧನೆ ನಡೆಸುವವಿದೆ ಎಂದು ಇಂಗಿತ ವ್ಯಕ್ತಪಡಿಸಿದರು.