Advertisement

ಕೃಷಿ ವಿವಿಯಲ್ಲಿ ನಿರ್ಮಾಣವಾಗಲಿದೆ ಆಕರ್ಷಕ ಮುಖ್ಯದ್ವಾರ

04:15 PM Nov 06, 2019 | Team Udayavani |

ರಾಯಚೂರು: ಇಷ್ಟು ದಿನ ಕೇವಲ ನಾಮಫಲಕದಿಂದ ಕಂಡು ಬರುತ್ತಿದ್ದ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇನ್ನು ಮುಂದೆ ತನ್ನದೇಯಾದ ಭಿನ್ನ ಕಲಾಕೃತಿಯೊಂದಿಗೆ ಸೆಳೆಯಲಿದೆ. ವಿವಿ ಮುಖ್ಯ ದ್ವಾರಬಾಗಿಲಿನಲ್ಲಿ ವಿಶೇಷ ಕಲಾಕೃತಿಗಳನ್ನು ನಿರ್ಮಿಸಲು ಆಡಳಿತ ಮಂಡಳಿ ಮುಂದಾಗಿದೆ.

Advertisement

ಕೃಷಿ ವಿವಿ ರೈತಪರ ಚಟುವಟಿಕೆಗಳನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಸಂಶೋಧನೆಗಳು, ಹೊಸ ಹೊಸ ತಳಿಗಳ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಅದರ ಜತೆಗೆ ಪ್ರತಿ ವರ್ಷ ಕೃಷಿಮೇಳ ನಡೆಸುವ ಮೂಲಕ ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮವೂ ನಡೆಯುತ್ತಿದೆ. ಈಗ ನಾಮಫಲಕಗಳ ಹೊರತಾಗಿಸಿ ಕೃಷಿ ವಿವಿಯ ಸಾಂಕೇತಿಕ ಚಿತ್ರಣಗಳಾಗಲಿ, ಕಲಾಕೃತಿಗಳಾಗಲಿ ಇಲ್ಲ. ಇದನ್ನು ಮನಗಂಡ ಕುಲಪತಿ ಕೆ.ಎನ್‌.ಕಟ್ಟಿಮನಿ ಅಂದಾಜು 14 ಲಕ್ಷ ರೂ. ವೆಚ್ಚದಲ್ಲಿ ವಿಭಿನ್ನ ಕಲಾಕೃತಿ ರಚನೆಗೆ ಮುಂದಾಗಿದ್ದಾರೆ. ಈಗಾಗಲೇ ಟೆಂಡರ್‌ ಹಂತದವರೆಗೆ ಪ್ರಕ್ರಿಯೆ ಮುಂದುವರಿದಿದ್ದು, ಏನೇನು ರಚಿಸಬೇಕು ಎಂಬ ನೀಲನಕ್ಷೆಯನ್ನು ಕೂಡ ತಯಾರಿಸಲಾಗಿದೆ.

ಹೀಗಿರಲಿದೆ ಮುಖ್ಯ ದ್ವಾರ: ಈಗ ದೊಡ್ಡ ದೊಡ್ಡ ಗೋಡೆಗಳು, ಅದರ ಮೇಲೆ ಒಂದೆಡೆ ಕನ್ನಡದಲ್ಲಿ ಮತ್ತೂಂದೆಡೆ ಇಂಗ್ಲಿಷ್‌ನಲ್ಲಿ ನಾಮಫಲಕಗಳಿವೆ. ಆದರೆ, ಈಗ ರೂಪುಗೊಂಡ ನೀಲನಕ್ಷೆ ಪ್ರಕಾರ ಕಿಲಾರಿ ತಳಿಯ ಎರಡು ಎತ್ತುಗಳಿಂದ ಜಮೀನು ಬಿತ್ತನೆ ಮಾಡುತ್ತಿರುವ ರೈತ. ಆತನ ಹಿಂದೆ ಸಾಗುತ್ತಿರುವ ರೈತ ಮಹಿಳೆ ಮಾದರಿ ನಿರ್ಮಿಸಲಾಗುತ್ತಿದೆ. ತಕ್ಷಣಕ್ಕೆ ನೋಡಿದರೆ ನೈಜವಾಗಿ ಕೆಲಸ ನಡೆದಿದೆಯೋ ಎನ್ನುವ ಭಾವ ಬರಬೇಕು ಎಂಬುದು ಅವರ ಅಭಿಪ್ರಾಯ. ಅದರ ಜತೆಗೆ ಎರಡು ಗೇಟ್‌ಗಳ ಬಳಿ ಹಳೇ ಪದ್ಧತಿಯಲ್ಲಿ ಸುಗ್ಗಿ ಮಾಡುತ್ತಿರುವ ರೈತರ ಕಲಾಕೃತಿಗಳು, ಆಧುನಿಕ ಕೃಷಿ ಪರಿಕರಗಳನ್ನು ನಿರ್ಮಿಸಲಾಗುತ್ತಿದೆ.

ಒಂದು ಬದಿ ತುಂಗಭದ್ರಾ, ಮತ್ತೂಂದು ಬದಿ ಕೃಷ್ಣೆ ಹೆಸರು ಬರೆಯಿಸಿ ನದಿಗಳ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಕೊನೆಯದಾಗಿ ಎರಡು ಬದಿಯ ತುದಿಗಳಲ್ಲಿನ ಗೋಡೆಗಳಿಗೆ ಕೃಷಿ ವಿವಿ ಸಂಶೋಧಿಸಿದ ಎಲ್ಲ ತಳಿಗಳ ಚಿತ್ರಗಳನ್ನು ಬಿಡಿಸಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು. ಆ ದೀಪಗಳು ಸೋಲಾರ್‌ ಶಕ್ತಿಯಿಂದ ಉರಿಯುವ ವ್ಯವಸ್ಥೆ ಮಾಡಲಿದ್ದು, ರಾತ್ರಿಯಾಗುತ್ತಿದ್ದಂತೆ ತನ್ನಿಂತಾನೆ ದೀಪಗಳು ಹೊತ್ತಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ. ರಾತ್ರಿ ಹೊತ್ತಿನಲ್ಲಿಯೂ ಈ ಕಲಾಕೃತಿ ನೋಡುಗರನ್ನು ಆಕರ್ಷಿಸಬೇಕು ಎಂಬುದು ಅವರ ಅನಿಸಿಕೆ.

14 ಲಕ್ಷ ರೂ. ವೆಚ್ಚ: ಒಂದೊಂದು ಕೆಲಸ ಬೇರೆ ಬೇರೆ
ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಚಿಂತನೆಯಿದ್ದು, ಟೆಂಡರ್‌ ಪ್ರಕ್ರಿಯೆ ನಡೆದಿದೆ. ಕಲಾಕೃತಿಗಳ ರಚನೆಗೆ ಒಂದು ಸಂಸ್ಥೆ, ಚಿತ್ರಗಳನ್ನು ಬಿಡಿಸಲು ಮತ್ತೂಂದು ಸಂಸ್ಥೆಗೆ ನೀಡಲಾಗುತ್ತಿದೆ. ಟೆಂಡರ್‌ ಕರೆಯಲಾಗಿದೆ. ಗುಡಿಕೋಟೆ ಕಲಾವಿದರು, ಸ್ಥಳೀಯ ಕಲಾವಿದರು, ಆಂಧ್ರ ಮೂಲದ ಕಲಾವಿದರಿಗೆ ಮಾಹಿತಿ ನೀಡಲಾಗಿದೆ. ಕಡಿಮೆ ದರದಲ್ಲಿ ಉತ್ತಮ ಕಲಾಕೃತಿ ನೀಡುವವರಿಗೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಕುಲಪತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next