ರಾಯಚೂರು: ಈಗ ಜಾರಿಯಲ್ಲಿರುವ ಎಲ್ಲ ಕಾಯ್ದೆಗಳನ್ನು ಒಳಗೊಂಡಂತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.11ರಂದು ನಗರದ ಅಂಬೇಡ್ಕರ್ ವೃತ್ತದ ಬಳಿ ರಾಯಚೂರು ವಿಭಾಗ ಮಟ್ಟದ ಸಾರಿಗೆ ನೌಕರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕರ ಸಂಘದ (ಸಿಐಟಿಯು ಸಂಯೋಜಿತ) ಅಧ್ಯಕ್ಷ ಶೇಕ್ಷಾ ಖಾದ್ರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ಕಾರ್ಮಿಕರು ಸರ್ಕಾರಿ ನೌಕರರಿಗಿಂತ ಹೆಚ್ಚು ಶ್ರಮಜೀವಿಗಳಾಗಿದ್ದಾರೆ. ಆದರೆ, ಸೌಲಭ್ಯ ವಿಚಾರದಲ್ಲಿ ಮಾತ್ರ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೇ, ಇಲಾಖೆಯಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತ, ಮೇಲಧಿ ಕಾರಿಗಳ ದೌರ್ಜನ್ಯ ಸಹಿಸುತ್ತ ಕೆಲಸ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಹಲವು ವರ್ಷಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾನೂನು ಬಾಹಿರವಾಗಿ ಕಿ.ಮೀ. ಹೆಚ್ಚಿಸಿ ಫಾರಂ-4 ತಯಾರಿಸುತ್ತಿರುವ ಹಾಗೂ ಶೆಡ್ನೂಲ್ ಓಟಿ ಕಡಿತಗೊಳಿಸಬೇಕು, ರಾತ್ರಿ ತಂಗುವ ಸ್ಥಳದಲ್ಲಿ ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಬೇಕು, ಕಾರ್ಮಿಕರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಬೇಕು, ಕಾರ್ಮಿಕರ ಮೇಲಿನ ದೌರ್ಜನ್ಯ, ಕಿರುಕುಳ ತಪ್ಪಿಸಬೇಕು, ವೇತನ ಹೆಚ್ಚಳ ಕಡಿತ ನಿಲ್ಲಿಸಬೇಕು, ಅನಧಿಕೃತ ಖಾಸಗಿ ವಾಹನಗಳ ಕಾರ್ಯಾಚರಣೆ ತಡೆಗಟ್ಟಿ ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸಂಸ್ಥೆ ಇಂದು ಸಾವಿರಾರು ಕೋಟಿ ಮೌಲ್ಯದ ಆಸ್ತಿ ಹೊಂದಿದೆ. ಕೋಟ್ಯಂತರ ವಹಿವಾಟು ಮಾಡುತ್ತಿದೆ. ಅದಕ್ಕೆ ಕಾರಣ 38 ಸಾವಿರ ಕಾರ್ಮಿಕರ ಹಗಲಿರುಳ ಶ್ರಮವಾಗಿದೆ. ಆದರೆ, ಇಂದು ಕಾರ್ಮಿಕರಿಗೆ ಮೂರು ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸಣ್ಣ ತಪ್ಪುಗಳಿಗೆ ಘೋರ ಶಿಕ್ಷೆ ವಿಧಿಸುತ್ತಿದ್ದಾರೆ. ಅಧಿಕಾರಶಾಹಿ ಪ್ರವೃತ್ತಿಗೆ ಕಾರ್ಮಿಕರು ತತ್ತರಿಸಿ ಹೋಗಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಬೇಡಿಕೆಗಳನ್ನು ಈಡೇರಿಸಬೇಕಿದೆ. ಕಾನೂನುರೀತ್ಯ ಕೆಲಸದ ಅವಧಿ ನಿಗದಿ ಮಾಡಬೇಕು, ಡ್ನೂಟಿ ರೋಟಾ ಪದ್ಧತಿಯನ್ನು ಎಲ್ಲ ಘಟಕಗಳಿಗೆ ಅಳವಡಿಸಬೇಕು. ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಆಡಳಿತ ವರ್ಗದ ಧೋರಣೆಗೆ ಕಡಿವಾಣ ಹಾಕಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಈಗಿರುವ ಕಾಯ್ದೆಗಳನ್ನು ಒಳಗೊಂಡಂತೆ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆ ಮುಖಂಡರು ಇದ್ದರು.