ರಾಯಚೂರು: ಸೆ.3ರಿಂದ ರಾಜ್ಯದಲ್ಲಿ ಮೋಟಾರ್ ವಾಹನ ಕಾಯ್ದೆ ಅನುಸಾರ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ವಾಹನ ಸವಾರರು ಆತಂಕದಲ್ಲೇ ಓಡಾಡುವಂತಾಗಿದೆ. ಇದರಿಂದ ಇಲಾಖೆಗೂ ಭರ್ಜರಿ ಆದಾಯ ಬರುತ್ತಿದ್ದು, ಪೊಲೀಸರು ಸವಾರರ ಮಧ್ಯೆ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.
ಈ ಮುಂಚೆ ಸವಾರರು ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿದ್ದರೂ ಪೊಲೀಸರು ಕೂಡ ನಾಮಕಾವಾಸ್ತೆ ಕೆಲವೊಂದು ವಾಹನಗಳನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಆದರೆ, ಪೊಲೀಸ್ ಇಲಾಖೆ ಸಿಬ್ಬಂದಿ ಮಾಹಿತಿ ಪ್ರಕಾರ ಪ್ರತಿಯೊಬ್ಬ ಸಿಬ್ಬಂದಿ ಇಂತಿಷ್ಟು ಕೇಸ್ ಹಾಕಲೇಬೇಕು ಎಂಬ ಷರತ್ತು ಒಡ್ಡಿದ್ದು, ಪರ್ಯಾಯ ಮಾರ್ಗವಿಲ್ಲದಂತಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ದಂಡ ಖಚಿತ ಎನ್ನುವಂತಾಗಿದೆ. ಈ ಮುಂಚೆ ನಿತ್ಯ ಬೆರಳೆಣಿಕೆ ಪ್ರಕರಣ ದಾಖಲಾಗುತ್ತಿದ್ದರೆ, ಈಗ ನೂರರ ಗಡಿ ದಾಟುತ್ತಿವೆ.
1.38 ಲಕ್ಷ ರೂ. ಸಂಗ್ರಹ: ಸೆ.4ರಿಂದ ಸೆ.8ರವರೆಗೆ ಜಿಲ್ಲೆಯಲ್ಲಿ ವಿವಿಧ ನಿಯಮಗಳ ಉಲ್ಲಂಘನೆಯಡಿ 718 ಪ್ರಕರಣಗಳನ್ನು ದಾಖಲಿಸಲಾಗಿದೆ. 1,38,200 ರೂ. ದಂಡ ವಿಧಿಸಿ ಹಣ ಸಂಗ್ರಹಿಸಲಾಗಿದೆ. ಈ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಸಿಗ್ನಲ್ ಜಂಪ್, ನೋ ಪಾರ್ಕಿಂಗ್, ಪರವಾನಗಿ ರಹಿತ ಚಾಲನೆ, ತ್ರಿಬಲ್ ರೈಡಿಂಗ್, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದೆ ಸಂಚಾರ, ವಿಮೆ ಇಲ್ಲದ ವಾಹನಗಳು ಹೀಗೆ ನಾನಾ ಕಾರಣಗಳಿಂದ ಪೊಲೀಸರು ಸವಾರರಿಗೆ ದಂಡ ಹಾಕುತ್ತಿದ್ದು, ಜನ ಆತಂಕಗೊಂಡಿದ್ದಾರೆ.
ಪ್ರಭಾವಕ್ಕಿಲ್ಲ ಮಣೆ: ಮುಂಚೆ ಪೊಲೀಸರು ವಾಹನ ಹಿಡಿದರೆ ಸಾಕು ಸವಾರರು ಅವರಿವರಿಂದ ಫೋನ್ ಮೂಲಕ ಮಾತನಾಡಿಸಿ ವಾಹನ ಬಿಡಿಸಿಕೊಂಡು ಹೋಗುತ್ತಿದ್ದರು. ಪೊಲೀಸರು ಕೂಡ ಯಾಕೆ ಬೇಕು ಸಹವಾಸ ಎಂದು ಬಿಟ್ಟು ಬಿಡುತ್ತಿದ್ದರು. ಆದರೆ, ಈಗ ಪೊಲೀಸರೇ ಪ್ರಭಾವಿಗಳಿಗೆ ಮಣೆ ಹಾಕುತ್ತಿಲ್ಲ. ಫೋನ್ ಮಾಡಿಕೊಟ್ಟರೂ ದಂಡದ ರಶೀದಿ ಹರಿದ ಬಳಿಕವೇ ಫೋನ್‌ನಲ್ಲೇ ಮಾತನಾಡುತ್ತಿದ್ದಾರೆ. ಇದರಿಂದ ಸದ್ಯದ ಮಟ್ಟಿಗಂತೂ ಯಾವ ಪ್ರಭಾವಗಳು ಪೊಲೀಸರನ್ನು ನಿಯಂತ್ರಿಸುವಂತೆ ಕಾಣುತ್ತಿಲ್ಲ. ಆದರೂ ಕೆಲ ಜನ ಜನಪ್ರತಿನಿಧಿಗಳ ಕಡೆಯಿಂದ ಕರೆ ಮಾಡಿಸಿ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಪರಿಷ್ಕೃತ ದರ ಅನ್ವಯ: ಸೆ.5ರಿಂದಲೇ ದಂಡದಲ್ಲಿ ಪರಿಷ್ಕೃತ ದರ ಅನ್ವಯವಾಗಿದೆ. ವಿವಿಧ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 500 ರೂ.ದಿಂದ 25 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತಿದೆ. ಹಳ್ಳಿಗಳಿಂದ ಬಂದ ಸವಾರರಿಗೆ ಈ ವಿಚಾರ ಮನವರಿಕೆ ಮಾಡುವಷ್ಟರಲ್ಲಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಮೊದಲೆಲ್ಲ 100-200 ರೂ. ಕೊಟ್ಟು ಹೋಗುತ್ತಿದ್ದ ಜನ ಈಗ ಸಾವಿರಾರು ಹಣ ನೀಡಬೇಕು ಎನ್ನುತ್ತಿರುವುದಕ್ಕೆ ಕಂಗಾಲಾಗಿದ್ದಾರೆ. ಇದರಿಂದ ಪೊಲೀಸರ ಜತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಪೊಲೀಸರ ಅಳಲು
ಸರ್ಕಾರದ ಈ ನಿಯಮದಿಂದ ಸವಾರರಿಗಿಂತ ಪೊಲೀಸರೇ ಕಂಗಾಲಾದಂತೆ ಕಾಣುತ್ತಿದೆ. ಸಣ್ಣ ಸಣ್ಣ ತಪ್ಪುಗಳಿಗೆ ಸಾವಿರಾರು ರೂ. ದಂಡ ಯಾರು ಕಟ್ಟುತ್ತಾರೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿಯೊಬ್ಬರು. ಜನ ತಪ್ಪು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯಬೇಕು. ಹೆಲ್ಮೆಟ್ ಇಲ್ಲದಿದ್ದರೆ ಸಾವಿರ ರೂ. ದಂಡ ಹಾಕಿದರೆ ಯಾವ ಸವಾರನೂ ಕಟ್ಟಲು ಒಪ್ಪುವುದಿಲ್ಲ ಬದಲಿಗೆ ನಮ್ಮೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ಇದು ಹೀಗೇ ಆದರೆ ಜನ ನಮ್ಮ ಜತೆ ಕೈ ಮಿಲಾಯಿಸಿದರೂ ಅಚ್ಚರಿ ಇಲ್ಲ. ಕೋರ್ಟ್ ನೋಟಿಸ್ ಕೊಡಿ ಅಲ್ಲೇ ಕಟ್ಟುತ್ತೇವೆ ಎನ್ನುತ್ತಾರೆ. ನೋಟಿಸ್ ಕೊಟ್ಟರೆ ಅವರ ವಾಹನ ಸೀಜ್ ಮಾಡಿ ದಂಡ ಕಟ್ಟುವವರೆಗೂ ಕಾಯಬೇಕು. ಅದು ಕೂಡ ತಲೆನೋವಿನ ಕೆಲಸ ಎನ್ನುವುದು ಸಿಬ್ಬಂದಿ ವಾದ.