ರಾಯಚೂರು: ಶೈಕ್ಷಣಿಕ ವರ್ಷ ಶುರುವಾಗುವ ಮುನ್ನ ಜಿಲ್ಲೆಗೆ ಬರಬೇಕಿದ್ದ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳಲ್ಲಿ ಇನ್ನೂ ಸ್ವಲ್ಪ ಬಾಕಿ ಉಳಿದಿದೆ. ಶೇ.68ರಷ್ಟು ಪಠ್ಯಪುಸ್ತಕ ಸರಬರಾಜಾದರೆ, ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ಗಳು ಬರಬೇಕಿದೆ.
ಈಗಾಗಲೇ ಸಾಕಷ್ಟು ಪಠ್ಯಪುಸ್ತಕಗಳನ್ನು, ಸಮವಸ್ತ್ರಗಳನ್ನು ಆಯಾ ಶಾಲಾ ಮುಖ್ಯಶಿಕ್ಷಕರು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ ದಾಖಲಾತಿ ಪ್ರಕ್ರಿಯೆ ನಡೆದಿರುವ ಹಿನ್ನೆಲೆಯಲ್ಲಿ ಉಳಿದ ಪುಸ್ತಕಗಳನ್ನು ಶಾಲಾ ಆರಂಭದ ವೇಳೆಗೆ ತಲುಪಿಸಲಾಗುವುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಸರ್ಕಾರಕ್ಕೆ ಸಲ್ಲಿಸಿದ ಬೇಡಿಕೆಯನುಸಾರ ಈವರೆಗೆ ಜಿಲ್ಲೆಗೆ ಶೇ.68ರಷ್ಟು ಪುಸ್ತಕಗಳನ್ನು ಪೂರೈಸಲಾಗಿದೆ. ಆಯಾ ಶಾಲಾ ಮುಖ್ಯಶಿಕ್ಷಕರು ಬಂದು ತಮ್ಮ ಪಾಲಿನ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದಾರೆ. 25,82,399 ಪುಸ್ತಕಗಳ ಬೇಡಿಕೆಯನ್ನು ಸಲ್ಲಿಸಿದ್ದು, ಈವರೆಗೆ 20,87,616 ಪುಸ್ತಕ ಸರಬರಾಜು ಮಾಡಲಾಗಿದೆ. ಇನ್ನು ಬಾಲಕಿಯರಿಗೆ ಒಟ್ಟು ಬರಬೇಕಿದ್ದ 1,24,664 ಸಮವಸ್ತ್ರಗಳ ಪೈಕಿ 97,676 ಮಾತ್ರ ತಲುಪಿವೆ. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಚೂಡಿದಾರ್‌ಗಳು ಬರಬೇಕಿದ್ದು, ಇನ್ನುಳಿದ 26,958 ಸಮವಸ್ತ್ರ ಪೂರೈಕೆ ಆಗಬೇಕಿದೆ.
ಇನ್ನು ಶಾಲಾ ಮೇಲುಸ್ತುವಾರಿಗಳ ಸಭೆ ನಡೆಸಿರುವ ಇಲಾಖೆ, ಪ್ರಸಕ್ತ ಸಾಲಿನಲ್ಲಿ ಕೈಗೊಂಡ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದೆ. ಶಾಲೆಗೆ ಬರುವ ಮಕ್ಕಳ ಹಾಜರಾತಿ, ಹೊಸ ಮಕ್ಕಳಿಗೆ ಪ್ರವೇಶಾತಿ ಪಕ್ರಿಯೆ ಜರುಗಿದೆ. ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳು ಹಾಗೂ ಖಾಸಗಿ ಶಾಲೆಗಳಿಗೂ ಅಗತ್ಯ ಪಠ್ಯಪುಸ್ತಕಗಳನ್ನು ಪೂರೈಸಲಾಗುತ್ತಿದೆ. ಖಾಸಗಿ ಶಾಲೆಗಳು ಹಣ ನೀಡಿ ಪುಸ್ತಕ ಖರೀದಿಸುವುದರಿಂದ ಅವರಿಗೆ ಬೇಡಿಕೆ ಅನುಸಾರ ಪೂರೈಕೆ ಮಾಡಲಾಗಿದೆ ಎಂದು ಡಿಡಿಪಿಐ ಬಿ.ಕೆ.ನಂದನೂರು ತಿಳಿಸಿದ್ದಾರೆ.
ಶಾಲಾ ಆರಂಭ ದಿನ ಮುಂದೂಡಿಕೆ: ಈ ವರ್ಷ ಮೇ 29ರಂದು ಶಾಲಾ ಪ್ರಾರಂಭೋತ್ಸವ ನಡೆಸಲು ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಬಿಸಿಲಿನ ಪ್ರಮಾಣ ಕಡಿಮೆ ಆಗದ ಕಾರಣ ಜಿಲ್ಲಾಡಳಿತ ಮಕ್ಕಳಿಗೆ ಜೂ.5ರವರೆಗೆ ಹೆಚ್ಚುವರಿ ರಜೆ ನೀಡಿದೆ. ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ಮೇ 29ರಿಂದ ಶಾಲೆಗಳಿಗೆ ಹಾಜರಾಗಬೇಕಿದೆ.
ಶಾಲೆ ಆರಂಭವಾದ ಮೊದಲ ದಿನವೇ ಮಕ್ಕಳಿಗೆಲ್ಲ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆ ಕಾರ್ಯಕ್ರಮಗಳನ್ನು ಜೂ.5ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ 1658 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ, 536 ಖಾಸಗಿ ಶಾಲೆಗಳು ಸೇರಿ 2,566 ಶಾಲೆಗಳಿದ್ದು, ಶಾಲಾ ಆರಂಭೋತ್ಸವಕ್ಕೆ ಹಬ್ಬದ ವಾತಾವರಣ ನಿರ್ಮಿಸುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಶಾಲಾ ಆರಂಭದ ದಿನ ಬಿಸಿಯೂಟದ ಜತೆ ಸಿಹಿ ಊಟ ಕೂಡ ನೀಡಲಾಗುವುದು. ಇದುವರೆಗೂ ಜಿಲ್ಲೆಯಲ್ಲಿ 934 ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿದ್ದು, ಅವರನ್ನು ಶಾಲೆಗೆ ದಾಖಲಿಸುವ ಕೆಲಸ ನಡೆದಿದೆ.
•
ಬಿ.ಕೆ. ನಂದನೂರು,
ಡಿಡಿಪಿಐ, ರಾಯಚೂರು