Advertisement

ಸ್ವಚ್ಛಮೇವ ಜಯತೆ ಆಂದೋಲನಕ್ಕೆ ಚಾಲನೆ

10:57 AM Jun 12, 2019 | Naveen |

ರಾಯಚೂರು: ಇಂದಿನ ಈ ಭೀಕರ ಕ್ಷಾಮಕ್ಕೆ ಮನುಷ್ಯನ ದುರಾಸೆಯೇ ಕಾರಣ. ಪರಿಸರ ಅಸಮತೋಲನ ಹೆಚ್ಚುತ್ತಿದ್ದು, ವಾತಾವರಣ ತನ್ನ ಸಮತೋಲನ ಶಕ್ತಿ ಕಳೆದುಕೊಳ್ಳುತ್ತಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್‌ ನಾಡಗೌಡ ವಿಷಾದಿಸಿದರು.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಜಿಲ್ಲಾಡಳಿತ, ಜಿಪಂ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛ ಮೇವ ಜಯತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸಮ್ಮಿಶ್ರ ಸರ್ಕಾರ ಈ ವರ್ಷವನ್ನು ಜಲವರ್ಷವೆಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಕುಡಿಯುವ ನೀರಿಗೂ ತತ್ವಾರ ಎದುರಿಸುವ ಸ್ಥಿತಿಗೆ ಬಂದು ನಿಂತಿದ್ದೇವೆ. 300-400 ಅಡಿ ಬೋರ್‌ವೆಲ್ಗಳನ್ನು ಕೊರೆದರೂ ನೀರು ಸಿಗುತ್ತಿಲ್ಲ. ರಾಜ್ಯದ ಕೆಲವೆಡೆ 1000ದಿಂದ 1500 ಅಡಿ ಬೋರ್‌ವೆಲ್ ಕೊರೆದರೂ ನೀರೇ ಸಿಗುತ್ತಿಲ್ಲ. ಇದಕ್ಕಿಂತ ದುರ್ಗತಿ ಇನ್ನೇನಿದೆ ಎಂದು ವಿಷಾದಿಸಿದರು.

ಪ್ರತಿ ಶಾಲಾ-ಕಾಲೇಜುಗಳಲ್ಲಿ ಗಿಡಗಳನ್ನು ನೆಟ್ಟು ಗಿಡದ ನಿರ್ವಹಣೆಗೆ ಒಂದೊಂದು ವಿದ್ಯಾರ್ಥಿಗಳಿಗೆ ಇದು ನಿನ್ನ ಗಿಡ ಎನ್ನುವಂತೆ ಅವರಿಗೆ ಜವಾಬ್ದಾರಿ ವಹಿಸಬೇಕು. ಉತ್ತಮ ಗಿಡಗಳನ್ನು ಬೆಳೆಸಿದ ಮಕ್ಕಳಿಗೆ ಡಿಡಿಪಿಐ ಮತ್ತು ಬಿಇಒಗಳಿಂದ ಸನ್ಮಾನಿಸಬೇಕು. ಈಗ ಕೋಲಾರದಲ್ಲಿ ನೀರಿನ ಪರಿಸ್ಥಿತಿ ಯಾವ ಹಂತಕ್ಕೆ ಬಂದಿದೆ ಎಂದರೆ ಬೆಂಗಳೂರಿನಲ್ಲಿ ಬಳಸಿದ ನೀರನ್ನೇ ಶುದ್ಧೀಕರಿಸಿ ಅಲ್ಲಿನ ಕೆರೆಗಳಿಗೆ ತುಂಬುವ ಕೆಲಸ ಮಾಡಲಾಗುತ್ತಿದೆ. ಈಗ ಮಳೆಗಾಲ ಶುರುವಾಗಿದ್ದು, ಗಿಡ ನೆಡುವ ಕಾರ್ಯಕ್ರಮ ಮಾಡಬೇಕಿದೆ ಎಂದರು.

ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷಿ ್ಮೕ ಮಾತನಾಡಿ, ಪ್ರತಿ ವರ್ಷ ಸ್ವಚ್ಛ ಮೇವ ಜಯತೇ ಕಾರ್ಯಕ್ರಮ ಮಾಡುತ್ತೇವೆ. ಇದರ ಯಶಸ್ಸಿಗೆ ಕೇವಲ ಅಧಿಕಾರಿಗಳು ಕೆಲಸ ಮಾಡಿದರೆ ಸಾಲದು ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು. ಗಿಡ ನಮಗೆ ನೆರಳು ಕೊಡುವ ಜತೆಗೆ ಅದು ಪರಿಸರ ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನೀಡುತ್ತದೆ. ಸ್ವಚ್ಛ ಮೇವ ಜಯತೆ ಆಂದೋಲನ ಜೂ.11ರಿಂದ ಜುಲೈ 10ರವರೆಗೆ ನಡೆಯಲಿದೆ. ಒಣ ಕಸ, ಹಸಿ ಕಸ ಎಂದು ವಿಂಗಡಿಸಿ ಸ್ವಚ್ಛ, ಸುಂದರ ಗ್ರಾಮೀಣ ಪರಿಸರ ನಿರ್ವಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸ್ವಚ್ಛ ಮೇವ ಜಯತೆ ಆಂದೋಲನ ನಿಮಿತ್ತ ಸಚಿವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಸಿಗಳನ್ನು ನೆಟ್ಟು ನಂತರ ಜಿಪಂ ಸಭಾಂಗಣದ ಆವರಣದಲ್ಲಿ ಸ್ವಚ್ಛತಾ ರಥಕ್ಕೆ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಸ್ವಚ್ಛ ಮೇವ ಜಯತೇ ಜಾಗೃತಿ ಕುರಿತು ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಸ್ವಚ್ಛತಾ ಪ್ರತಿಜ್ಞಾವಿಧಿ ಸ್ವೀಕರಿಸಿದರು.

Advertisement

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಬಸನಗೌಡ ದದ್ದಲ್, ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಂ ನಾಯಕ, ಜಿಪಂ ಸದಸ್ಯ ಮಹಾಂತೇಶ ಪಾಟೀಲ ಅತ್ತನೂರು, ತಾಪಂ ಅಧ್ಯಕ್ಷೆ ಜಯಮ್ಮ ಕೆ., ಜಿಲ್ಲಾಧಿಕಾರಿ ಶರತ್‌ ಬಿ., ಜಿಪಂ ಸಿಇಒ ನಲಿನ್‌ ಅತುಲ್, ಸಹಾಯಕ ಆಯುಕ್ತೆ ಶಿಲ್ಪಾ ಶರ್ಮಾ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next