ರಾಯಚೂರು: ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳು ಬಂದರೆ ತಾಪಮಾನ ತಾಳದೆ ಜನ ನಿಟ್ಟುಸಿರು ಬಿಡುತ್ತಿದ್ದರು. ಆದರೆ, ಈ ವರ್ಷ ಬೇಸಿಗೆಯನ್ನು ಮನೆಯಲ್ಲಿಯೇ ಕಳೆಯುವಂತಾಗಿದ್ದು, ಉಷ್ಣಾಂಶದಲ್ಲೂ ಏರಿಕೆ ಕಂಡುಬಂದಿಲ್ಲ.
ಕಳೆದ ವರ್ಷ ಈ ವೇಳೆಗಾಗಲೇ 43 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿತ್ತು. ಹೊರಗೆ ಕೆಂಡದಂತ ಬಿಸಿಲಿದ್ದರೂ ಜನ ವಿಧಿ ಇಲ್ಲದೇ ಓಡಾಡುತ್ತಿದ್ದರು. ಈ ಬಾರಿ ಕೋವಿಡ್ ಬಂದು ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಏಪ್ರಿಲ್ ತಿಂಗಳು ಬಹುತೇಕ ಮನೆಯಲ್ಲಿಯೇ ಕಳೆಯಲಾಗಿದೆ. ಇನ್ನು ಮೇ ತಿಂಗಳು ಶುರುವಾಗಿ ಒಂದು ವಾರ ಕಳೆದರೂ ಬಿಸಿಲಿನ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ದಾಟಿಲ್ಲ. ಜನರು ಮಾತ್ರ ಇನ್ನೂ ಲಾಕ್‌ಡೌನ್ ಗುಂಗಲ್ಲೇ ಇದ್ದು, ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ವಾರ ಉಷ್ಣಾಂಶ 41 ಡಿಗ್ರಿ ಸೆಲ್ಸಿಯಸ್ ತಲುಪಿತ್ತಾದರೂ ಮೋಡ ಕವಿದ ವಾತಾವರಣ ಹೆಚ್ಚಾಗಿರುವ ಕಾರಣ ಮತ್ತೆ ಕಡಿಮೆಯಾಗಿದೆ. ಈ ತಿಂಗಳಲ್ಲಿ ಅಬ್ಬಬ್ಟಾ ಎಂದರೆ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎನ್ನುತ್ತಾರೆ ತಜ್ಞರು. ಆದರೆ, ಅದು ಒಂದೆರಡು ದಿನ ಅಷ್ಟೇ. ಕಳೆದ ವರ್ಷ ಮೇ ಕೊನೆ ವೇಳೆ ಐದಾರು ದಿನ 43 ಡಿಗ್ರಿ ಸೆಲಿಯಸ್ ದಾಟಿತ್ತು.
ಬೇಸಿಗೆ ವಹಿವಾಟು ಬಂದ್: ಬೇಸಿಗೆ ಬಂದರೆ ಸಾಕು, ಈ ಭಾಗದಲ್ಲಿ ಕೆಲವೊಂದು ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತವೆ. ಈ ಬಾರಿ ಬಹುತೇಕ ವಹಿವಾಟು ನಿಂತು ಹೋಗಿದೆ. ಮುಖ್ಯವಾಗಿ ತಂಪು ಪಾನೀಯಗಳಾದ ಮಜ್ಜಿಗೆ, ಲಸ್ಸಿ, ಎಳನೀರು, ಸೋಡಾ, ಶರಬತ್ತು, ಕಲ್ಲಂಗಡಿ ಮಾರಾಟ ಇಲ್ಲದಾಗಿದೆ. ಮಡಕೆಗಳ ವ್ಯಾಪಾರ ಕುಗ್ಗಿದೆ. ಕೂಲರ್, ಎಸಿಗಳ ಖರೀದಿಯಾಗದೆ ವ್ಯಾಪಾರಸ್ಥರಿಗೆ ನಷ್ಟವಾಗಿದೆ. ಈಗ ಅಂಗಡಿಗಳು ತೆರೆದರೂ ಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬೇಸಿಗೆ ತೀವ್ರತೆ ಹೆಚ್ಚಾಗುತ್ತಿದ್ದ ಮಾರ್ಚ್ ಅಂತ್ಯದಲ್ಲೇ ಲಾಕ್‌ಡೌನ್ ಜಾರಿಯಾಗಿ ವ್ಯಾಪಾರವೇ ನಿಂತು ಹೋಗಿದೆ. ಲಾಕ್‌ಡೌನ್ ಸಡಿಲಿಕೆಯಾಗಿ ಮಧ್ಯಾಹ್ನದವರೆಗೆ ಮಾತ್ರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಮೇ ತಿಂಗಳು ಕೂಡ ಮನೆಯಲ್ಲಿಯೇ ಕಳೆಯುವ ಸಾಧ್ಯತೆಗಳಿದ್ದು, ಬೇಸಿಗೆ ಸದ್ದಿಲ್ಲದೇ ಕಳೆದು ಹೋಗುವ ಲಕ್ಷಣ ಸ್ಪಷ್ಟವಾಗಿದೆ.
ತೇವಾಂಶ- ಮಾಲಿನ್ಯ ಕಾರಣ: ಕಳೆದ ವರ್ಷ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿರುವುದು ಈ ಬಾರಿ ಉಷ್ಣಾಂಶ ಕಡಿಮೆಯಾಗಲು ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಭೂಮಿಯಲ್ಲಿ ಇನ್ನೂ ತೇವಾಂಶ ಉಳಿದಿದ್ದು, ಸೂರ್ಯನ ಶಾಖ ಪ್ರತಿಫಲಿಸುತ್ತಿಲ್ಲ. ಅಲ್ಲದೇ, ಕೆರೆ ಕಟ್ಟೆಗಳಲ್ಲಿ ನೀರಿದೆ. ಸಂಜೆಯಾದರೆ ಸಾಕು ಗುಡುಗು ಮಿಂಚು ಸಹಿತ ಅಲ್ಲಲ್ಲಿ ಮಳೆಯಾಗಿ ಇಳೆ ತಂಪಾಗುತ್ತಿದೆ. ಅದರ ಜತೆಗೆ ಕಳೆದ ಒಂದೂವರೆ ತಿಂಗಳಿಂದ ಜಿಲ್ಲೆಯಲ್ಲಿ ವಾಹನಗಳ ಓಡಾಟವೇ ಇಲ್ಲದ್ದರಿಂದ ವಾಯುಮಾಲಿನ್ಯ ಕಡಿಮೆಯಾಗಿದ್ದು, ಉಷ್ಣಾಂಶ ತಗ್ಗಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಬಿಸಿಲಿನ ಪ್ರಮಾಣ ಈ ಬಾರಿ 2-3 ಸೆಲ್ಸಿಯಸ್‌ನಷ್ಟು ಕಡಿಮೆಯಾಗಿದೆ. ಈವರೆಗೆ ಎರಡು ದಿನ ಮಾತ್ರ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಳೆದ ವರ್ಷ ಇದೇ ವೇಳೆಗೆ 43 ಡಿಗ್ರಿ ಸೆಲ್ಸಿಯಸ್ ಇತ್ತು. ಮೇ ಕೊನೆಗೆ 42 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಬಹುದು. ಆದರೆ, ಹೆಚ್ಚು ದಿನ ಇರಲಿಕ್ಕಿಲ್ಲ. ಕಳೆದ ವರ್ಷ ಸುರಿದ ಅಧಿಕ ಪ್ರಮಾಣದ ಮಳೆಯೂ ಇದಕ್ಕೆ ಕಾರಣ. ಈ ಬಾರಿಯೂ ಉತ್ತಮ ಮಳೆ ಸಾಧ್ಯತೆಗಳಿವೆ.
ಡಾ| ಶಾಂತಪ್ಪ ದುತ್ತರಗಾವಿ,
ತಾಂತ್ರಿಕ ಅಧಿಕಾರಿ-ಹವಾಮಾನ ವಿಭಾಗ
ಕೃಷಿ ವಿವಿ ರಾಯಚೂರು