ರಾಯಚೂರು: ಮಕ್ಕಳು ಬೇಸಿಗೆ ರಜೆಗಳನ್ನು ಕೇವಲ ಟಿವಿ ನೋಡಿ, ಮೊಬೈಲ್ಗಳಲ್ಲಿ ಆಟ ಆಡಿ ಕಳೆದುಬಿಡುತ್ತಾರೆ. ಆದರೆ, ಆಟದ ಜತೆಗೆ ಪಾಠ ಬೋಧಿಸುವ ವಿಶೇಷ ಉಚಿತ ಶಿಬಿರವೊಂದು ನಗರದಲ್ಲಿ ಒಂದು ವಾರಗಳ ಯಶಸ್ವಿಯಾಗಿ ನಡೆಯಿತು.
ಆರ್‌ಟಿಒ ವೃತ್ತದ ನಿಸರ್ಗಧಾಮದಲ್ಲಿ ಗ್ರಾಮೀಣ ಭಾಗದ 40 ಹಾಗೂ ನಗರ ಭಾಗದ 25 ವಿದ್ಯಾರ್ಥಿಗಳಿಗಾಗಿ ಶಿಬಿರ ನಡೆಸಲಾಯಿತು. ಆಟದ ಜತೆ ಜತೆಗೆ ಪಾಠ ಕೂಡ ಹೇಳಲಾಯಿತು. ಭಾರತ ಜ್ಞಾನ ವಿಜ್ಞಾನ ಸಮಿತಿ ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಬಾರಿಯೂ ಬಾಲಭವನ ಸೊಸೈಟಿ ಬೆಂಗಳೂರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಅರಣ್ಯ ಇಲಾಖೆ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಮುದಾಯ ಸಂಘಟನೆ ಹಾಗೂ ರಾಯಚೂರು ಹಸಿರು ಬಳಗದ ಸಹಯೋಗದಲ್ಲಿ ಶಿಬಿರ ನಡೆಸಿತು.
ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಶಿಬಿರ ವಿವಿಧ ಚಟುವಟಿಕೆ ಹಮ್ಮಿಕೊಂಡಿತ್ತು. ಜಾಗತಿಕ ತಾಪಮಾನ, ಪರಿಸರ, ಮಣ್ಣಿನ ರಕ್ಷಣೆ ಜತೆಗೆ ವಿವಿಧ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಜತೆಗೆ ರಾಯಚೂರಿನ ಕೋಟೆಗಳ ಪರಿಚಯ, ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಅದರ ಕಾರ್ಯಚಟುವಟಿಕೆ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಅಲ್ಲಿನ ಸಾವಯವ ಗೊಬ್ಬರ ತಯಾರಿ, ಮಣ್ಣು ಮತ್ತು ನೀರಿನ ಪರೀಕ್ಷೆ ಕುರಿತು ವಿವರಿಸಲಾಯಿತು. ಮ್ಯೂಸಿಯಂಗೆ ಭೇಟಿ ನೀಡಿ ಬೀಜ ಘಟಕದ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು.
ವಿಜ್ಞಾನ ಕೇಂದ್ರದಲ್ಲಿ ಮಾನವನ ದೇಹದ ರಚನೆ, ವಿವಿಧ ಅಂಗಾಂಗ ರಚನೆ, ಕಾರ್ಯ ವೈಖರಿ, ಭೂಮಿ ಉಗಮ, ಪವಾಡ ಬಯಲು ಸೇರಿದಂತೆ ವಿಜ್ಞಾನ ವಿಸ್ಮಯ ತೋರಿಸಲಾಯಿತು. ಜತೆಗೆ ಮಕ್ಕಳಿಗೆ ಪೇಂಟಿಂಗ್, ಮುಖವಾಡ ರಚನೆ, ಮಣ್ಣಿನಿಂದ ಆಭರಣ ತಯಾರಿಕೆ, ಮ್ಯಾಜಿಕ್ ಮ್ಯಾತ್ಸ್, ಪರಿಸರ ರಕ್ಷಣೆ ಜಾಗೃತಿ ಮೂಡಿಸುವ ಹಾಡುಗಳು, ಯೋಗಾಭ್ಯಾಸ, ಏರೋಬಿಕ್ಸ್ ಹೇಳಿಕೊಡಲಾಯಿತು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ಪಿ.ಎನ್. ಕುಮಾರ್, ರಾಘವೇಂದ್ರ ಪುಚ್ಚಲದಿನ್ನಿ, ಎಂ. ಸವಿತಾ, ಮೈತ್ರಾ ಹಾಗೂ ವಿಜ್ಞಾನ ಕೇಂದ್ರದ ಸಂಯೋಜಕ ಅಜಿತ್, ಸಂಚಾರಿ ಪೊಲೀಸ್ ಠಾಣೆಯ ಶೀಲಾ, ಸಾಹಿತಿಗಳಾದ ವೀರ ಹನುಮಾನ ಎಚ್.ಎಚ್. ಮ್ಯಾದರ್, ಶಿಕ್ಷಣ ಇಲಾಖೆಯ ಡಾ| ಈರಣ್ಣ ಕೋಸಗಿ, ವಿಜ್ಞಾನ ಕೇಂದ್ರದ ಸಿಬ್ಬಂದಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿಯ ಕೃಷ್ಣಮೂರ್ತಿ, ಶ್ರೀನಿವಾಸ್, ಲಿಂಗಪ್ಪ, ಪ್ರದೀಪ್ ಕುಮಾರ ಇತರರು ಪಾಲ್ಗೊಂಡಿದ್ದರು.
ಸಂಚಾರಿ ತಾರಾಲಯದಲ್ಲಿ ನಕ್ಷತ್ರಗಳ ಹುಟ್ಟು ಸಾವು, ಭೂಮಿ ಹುಟ್ಟಿದ್ದು ಹೇಗೆ ಹಾಗೂ ಮಾನವನ ದೇಹದ ವಿವಿಧ ಭಾಗಗಳನ್ನು ನಾನು ಇದೇ ಮೊದಲ ಬಾರಿಗೆ ನೋಡಿದ್ದು. ಈ ಶಿಬಿರದಲ್ಲಿ ಪಾಲ್ಗೊಂಡಿರುವುದು ಹೆಚ್ಚು ಖುಷಿ ನೀಡಿದೆ.
•ವೀರೇಂದ್ರ,
8ನೇ ತರಗತಿ ವಿದ್ಯಾರ್ಥಿ, ಕೆರೆ ಬುದೂರ್ ಕ್ಯಾಂಪ್
ಪ್ರಕೃತಿ ಸೊಬಗಿನಲ್ಲಿ ಇಂಥ ಶಿಬಿರ ನಡೆಸುವುದು ಹೊಸ ಅನುಭವ ನೀಡಿದೆ. ಶಿಬಿರದಲ್ಲಿ ರಾಯಚೂರಿನ ಕೋಟೆಗಳು ಮತ್ತು ಇತಿಹಾಸ ಕುರಿತು ಪರಿಚಯ ಮಾಡಿಕೊಟ್ಟಿದ್ದು, ಮ್ಯಾಜಿಕ್ ಮ್ಯಾತ್ಸ್ಗಳು ನಮ್ಮ ಮುಂದಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿವೆ.
•ಕೀರ್ತನಾ ಪತ್ತಾರ,
ಶಿಬಿರಾರ್ಥಿ, 9ನೇ ತರಗತಿ