Advertisement

ಗೊಂದಲಕ್ಕೆಡೆ ಮಾಡಿದ ಯುವತಿ ಸಾವು ಪ್ರಕರಣ

04:11 PM May 12, 2019 | Naveen |

ರಾಯಚೂರು: ರಾಜ್ಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಇಲ್ಲಿನ ನವೋದಯ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಮತ್ತೂಂದು ತಿರುವು ಸಿಕ್ಕಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಇದು ಆತ್ಮಹತ್ಯೆ ಎಂದಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡುತ್ತಿದೆ.

Advertisement

ಇದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ ಎಂದು ಪಾಲಕರು ಸೇರಿದಂತೆ ಕಾಲೇಜಿನ ಅನೇಕ ವಿದ್ಯಾರ್ಥಿಗಳು, ವಿಶ್ವಕರ್ಮ ಸಮಾಜದವರು ಆಗ್ರಹಿಸಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಅಲ್ಲದೇ ಪೊಲೀಸರು ಆರೋಪಿ ಸುದರ್ಶನ್‌ ಯಾದವನನ್ನು ವಶಕ್ಕೆ ಪಡೆದು ಸಾಕಷ್ಟು ವಿಚಾರಣೆ ನಡೆಸಿದ್ದಾರೆ. ಕೊನೆಗೆ ಸರ್ಕಾರ ಸಿಐಡಿಗೆ ಪ್ರಕರಣ ವಹಿಸಿದ್ದು, ಕಳೆದ ಕೆಲ ದಿನಗಳಿಂದ ಸಿಐಡಿ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.

ಯುವತಿ ಶವ ಸಿಕ್ಕಾಗ ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಪಾಲಕರ ದೂರಿನ ಮೇರೆಗೆ ಅತ್ಯಾಚಾರ ಮತ್ತು ಕೊಲೆ ಎಂದು ಮತ್ತೂಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯ ಹೆಚ್ಚಾಗಿದ್ದರಿಂದ ಸಿಐಡಿಗೆ ವಹಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಸಿಐಡಿ ಪೊಲೀಸರು ತನಿಖೆ ನಡೆಸಿ ಈಗ ಆತ್ಮಹತ್ಯೆ ಎಂದಿದ್ದಾರೆ ಎಂಬ ಸುದ್ದಿ ಹರಡಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಇಂಥ ಹೇಳಿಕೆಗಳಿಂದ ಪ್ರಕರಣದ ಹಾದಿ ತಪ್ಪಿಸುವ ಹುನ್ನಾರ ನಡೆದಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡರು ಆರೋಪಿಸಿದ್ದಾರೆ. ಈ ಕುರಿತು ಪಾಲಕರನ್ನು ವಿಚಾರಿಸಿದರೆ, ಸಿಐಡಿ ಪೊಲೀಸರಾಗಲಿ, ಜಿಲ್ಲೆಯ ಪೊಲೀಸರಾಗಲಿ ನಮಗೆ ಯಾವುದೇ ವಿಚಾರ ತಿಳಿಸಿಲ್ಲ. ಹೀಗಾಗಿ ಈ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹ
ಪ್ರಕರಣದ ಸಮಗ್ರ ತನಿಖೆಯಾಗಬೇಕಾದರೆ ಸಿಬಿಐ ತನಿಖೆ ಕೈಗೊಳ್ಳಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡರು ಒತ್ತಾಯಿಸುತ್ತಿದ್ದಾರೆ. ನಮ್ಮ ಸಂಪ್ರದಾಯದ ಪ್ರಕಾರ ಶವವನ್ನು ಚಿತೆಯಲ್ಲಿ ಸುಡುತ್ತೇವೆ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ಮಣ್ಣಲ್ಲಿ ಹೂಳಲಾಗಿದೆ. ಸಿಬಿಐಗೆ ವಹಿಸಿ ಮತ್ತೂಮ್ಮೆ ಶವ ಪರೀಕ್ಷೆ ನಡೆಸಿದರೆ ಸತ್ಯ ಗೊತ್ತಾಗಲಿದೆ ಎಂದು ಒತ್ತಾಯಿಸುತ್ತಿದ್ದಾರೆ.

ಯುವತಿ ಸಾವಿನ ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ನಮ್ಮನ್ನಾಗಲಿ, ಕುಟುಂಬ ಸದಸ್ಯರನ್ನಾಗಲಿ ಯಾವ ಪೊಲೀಸರು ಸಂಪರ್ಕಿಸಿಲ್ಲ. ಯಾವುದೇ ಮಾಹಿತಿ ನಮಗೆ ಈವರೆಗೂ ನೀಡಿಲ್ಲ. ಮೊದಲಿನಿಂದಲೂ ಪ್ರಕರಣದ ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸಿದ್ದರು. ಬಳಿಕ ಒತ್ತಡ ಹಾಕಿದ ಬಳಿಕ ಅದನ್ನು ಅತ್ಯಾಚಾರ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಸಿಐಡಿಗೆ ವಹಿಸಿರುವುದರಿಂದ ನ್ಯಾಯ ಸಿಗುವ ವಿಶ್ವಾಸ ಇರಲಿಲ್ಲ. ಪೊಲೀಸ್‌ ಅಧಿಕಾರಿ ಗಣಪತಿ ಪ್ರಕರಣ, ಡಿ.ಕೆ. ರವಿ ಪ್ರಕರಣ, ವಿಜಯಪುರದ ವಿದ್ಯಾರ್ಥಿನಿ ಪ್ರಕರಣಗಳನ್ನು ಸಿಐಡಿ ಆತ್ಮಹತ್ಯೆ ಎಂದೇ ವರದಿ ನೀಡಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.
•ಮಾರುತಿ ಬಡಿಗೇರ,
ವಿಶ್ವಕರ್ಮ ಸಮಾಜದ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next