ರಾಯಚೂರು: ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಹಾಪ್ ಕಾಮ್‌ಗಳನ್ನು ಆರಂಭಿಸಿ ತೋಟಗಾರಿಕೆ ಬೆಳೆ ಮಾರಾಟ ಮಾಡಲು ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು. ನಗರದ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ,
ಕೋವಿಡ್-19 ದಿಂದ ರೈತರಿಗೆ ದೊಡ್ಡ ಪೆಟ್ಟು ಬಿದ್ದಿದೆ. ಅದರಲ್ಲೂ ಹಣ್ಣು, ತರಕಾರಿ ಬೆಳೆಗಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಹೀಗಾಗಿ ಅವರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ಚೆಕ್‌ಪೋಸ್ಟ್‌ಗಳಲ್ಲಿ ಕೃಷಿಗೆ ಸಂಬಂಧಿಸಿದ ಯಾವುದೇ ವಾಹನ ತಡೆಯಬೇಡಿ. ಕೃಷಿ ಯಂತ್ರೋಪಕರಣಗಳ ಅಂಗಡಿ ತೆರೆಯಲು ಅನುವು ಮಾಡಿಕೊಡಿ. ಡೀಸೆಲ್ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ, ಇದು ಸಂಕಷ್ಟದ ಸಮಯವಾಗಿದ್ದು, ಮುಂಗಾರು ಹಂಗಾಮಿನಲ್ಲಿ ಎಲ್ಲ ರೈತರಿಗೆ ಉಚಿತ ಬಿತ್ತನೆ ಬೀಜ, ರಸಗೊಬ್ಬರ ನೀಡಬೇಕು. ಅದಕ್ಕಾಗಿ ಅಭಿವೃದ್ಧಿ ಕೆಲಸ ನಿಲ್ಲಿಸಿದರೂ ಚಿಂತೆ ಬೇಡ. ಅದರ ಜತೆಗೆ ಹಗಲಿರುಳು ಶ್ರಮಿಸುತ್ತಿರುವ ಸರ್ಕಾರಿ ನೌಕರರ ವೇತನ ಮಾತ್ರ ತಡೆಯದಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಉಚಿತ ಬೀಜ, ಗೊಬ್ಬರ ವಿತರಣೆ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ರೈತ ಸಂಘದ ಮುಖಂಡ ಚಾಮರಸ ಮಾಲಿಪಾಟೀಲ್ ಮಾತನಾಡಿ, ಒಂದೆಡೆಯಿಂದ ಮತ್ತೂಂದೆಡೆ ಕೃಷಿ ಕೂಲಿಕಾರರು ಹೋಗಬೇಕಾದರೆ ಟಂಟಂಗಳಲ್ಲೇ ಹೋಗಬೇಕಿದೆ. ಅಂಥ ವೇಳೆ ಪೊಲೀಸರು ಹಿಡಿದು ದಂಡ ವಿಧಿಸುತ್ತಿದ್ದಾರೆ. ಬೆಳೆ ಕಟಾವು ಸಕಾಲಕ್ಕೆ ಆಗದಿದ್ದಲ್ಲಿ ಮತ್ತಷ್ಟು ನಷ್ಟ ಎದುರಾಗಲಿದೆ. ಈವರೆಗೂ ಬೆಳೆ ನಷ್ಟ ಪರಿಹಾರ ಬಂದಿಲ್ಲ. ಸಬ್ಸಿಡಿಗಳು ರೈತರ ಬದಲಿಗೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಬೆಳೆಗಳಿಗೆ ಸ್ಥಿರ ಬೆಲೆ ನಿಗದಿ ಮಾಡಿದರೆ ಸಾಕು ಯಾವ ಸಬ್ಸಿಡಿ ಕೂಡ ಬೇಕಾಗುವುದಿಲ್ಲ ಎಂದರು.
ದೇವದುರ್ಗ ಶಾಸಕ ಶಿವನಗೌಡ ನಾಯಕ ಮಾತನಾಡಿ, ದೇವದುರ್ಗ ತಾಲೂಕನ್ನು ಬರ ಪೀಡಿತ ಸಾಲಿನಿಂದ ಕೈ ಬಿಡಲಾಗಿದೆ. ಅದನ್ನೂ ಸೇರಿಸುವಂತೆ ತಿಳಿಸಿದರು. ರಸಗೊಬ್ಬರ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ರಸಗೊಬ್ಬರ ಸಾಗಣೆಗೆ ಅನುವು ಮಾಡಿಕೊಡಬೇಕು ಎಂದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು ಸಾಗಣೆಗೆ ಏನು ಅಡ್ಡಿಯಾದರೂ ನಿವಾರಿಸುವುದಾಗಿ ತಿಳಿಸಿದರು. ಈ ವೇಳೆ ಶಾಸಕರಾದ ವೆಂಕಟರಾವ್ ನಾಡಗೌಡ, ಎನ್.ಎಸ್. ಬೋಸರಾಜ್, ಡಾ| ಶಿವರಾಜ್ ಪಾಟೀಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಸೇರಿದಂತೆ ಇತರರು ಇದ್ದರು.