ರಾಯಚೂರು: ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಯಾತಕ್ಕೂ ಸಾಲುತ್ತಿಲ್ಲ. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಹೋರಾಟ ನಡೆಸಿದರು.
ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ರೈತರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆಯಲ್ಲೇ ಧರಣಿ ಕುಳಿತ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನೆರೆಯಿಂದ ಸಾಕಷ್ಟು ಆಸ್ತಿ, ಪಾಸ್ತಿ, ಜನ ಜಾನುವಾರು ಕೊಚ್ಚಿಕೊಂಡು ಹೋಗಿವೆ. ಇಂಥ ಸಂದರ್ಭದಲ್ಲಿ ಕೈ ಹಿಡಿಯಬೇಕಿದ್ದ ಸರ್ಕಾರ ಅಲ್ಪ ಪ್ರಮಾಣದ ಪರಿಹಾರ ಘೋಷಿಸಿದೆ. ಅದು ಕೂಡ ಈವರೆಗೆ ಸರಿಯಾಗಿ ವಿತರಣೆ ಆಗಿಲ್ಲ.
ಮತ್ತೂಂದೆಡೆ ಬರ ಆವರಿಸಿದ್ದು, ಮೇವು, ಕುಡಿಯುವ ನೀರು ಕೂಡ ಸಿಗುತ್ತಿಲ್ಲ. ಆದರೆ, ಇಷ್ಟೆಲ್ಲ ಜ್ವಲಂತ ಸಮಸ್ಯೆಗಳ ಮಧ್ಯೆಯೂ ಸರ್ಕಾರಗಳು ಯುದ್ಧೋಪಾದಿ ಕ್ರಮಕ್ಕೆ ಮುಂದಾಗದೆ ಕಾಲಹರಣ ಮಾಡುತ್ತಿರುವುದು ಖಂಡನೀಯ ಎಂದು ದೂರಿದರು. ಸರ್ಕಾರ ನಡೆಸಿದ ಸಮೀಕ್ಷೆ ಹಾಗೂ ಎನ್‌ಡಿಆರ್‌ಎಫ್ ನಿಯಮದನ್ವಯ ಈಗ ಬೆಳೆ ಹಾನಿ, ಆಸ್ತಿ, ಪಾಸ್ತಿಗೆ ನಿಗದಿ ಮಾಡಿದ ಪರಿಹಾರ ಸಾಲುತ್ತಿಲ್ಲ. ಬೆಳೆಗೆ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ರೂ., ತೋಟಗಾರಿಕೆ ಬೆಳೆಗೆ ಎರಡು ಲಕ್ಷ, ಜಾನುವಾರು ಸಾವಿಗೆ 80 ಸಾವಿರ, ಆಡು, ಕುರಿ ಸಾವಿಗೆ 25 ಸಾವಿರ, ಸಂಪೂರ್ಣ ಮನೆ ಹಾನಿಗೆ 15 ಲಕ್ಷ ಪರಿಹಾರ ನೀಡಬೇಕು. ನದಿ ಪಾತ್ರದಲ್ಲಿ ಅಪಾಯಕ್ಕೆ ತುತ್ತಾಗುವ ಗ್ರಾಮಗಳನ್ನು ಗುರುತಿಸಿ ಶಾಶ್ವತ ನೆಲೆ ಕಲ್ಲಿಸಬೇಕು ಎಂದು ಒತ್ತಾಯಿಸಿದರು. ವೈಟಿಪಿಎಸ್‌ಗೆ ಭೂಮಿ ನೀಡಿದ ಸಂತ್ರಸ್ತ ಕುಟುಂಬಗಳಿಗೆ ಈವರೆಗೆ ಉದ್ಯೋಗ ನೀಡದೆ ವಂಚಿಸಲಾಗುತ್ತಿದೆ. ಸುತ್ತಲಿನ ಗ್ರಾಮಗಳ ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯ ತೋರುತ್ತಿವೆ. ಕಾರ್ಖಾನೆಗಳ ಮೂಲಕ ನದಿಗೆ ವಿಷಪೂರಿತ ತ್ಯಾಜ್ಯ ಬಿಡಲಾಗುತ್ತಿದೆ. ಅಂಥ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ವಾಸುದೇವ ಮೇಟಿ, ಶಿವಪ್ಪ, ರಾಮಣ್ಣ, ಆಂಜನೇಯ, ಶಂಕರ, ನರಸಪ್ಪ, ನರಸಿಂಹ, ಹನುಮಂತ, ಭಾನುಬೀ, ಶಬಾನಾ ಬೇಗಂ ಸೇರಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ರೈತರು ಪಾಲ್ಗೊಂಡಿದ್ದರು. ಹೋರಾಟದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಪ್ರಯಾಣಿಕರು ಸುತ್ತುವರಿದು ಸಂಚರಿಸುವಂತಾಯಿತು.