ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು: ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡ ತಡೆಗೆ ಕಡ್ಡಾಯವಾಗಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳನ್ನು ರಿಮ್ಸ್‌ನಲ್ಲಿ ಈಗ ಕೈಗೊಳ್ಳಲಾಗುತ್ತಿದೆ. ಅರೆಬರೆಯಾಗಿದ್ದ ಕಾಮಗಾರಿಯನ್ನು 2.35 ಕೋಟಿ ರೂ. ವೆಚ್ಚದಲ್ಲಿ ಈಗ ಮುಗಿಸಲಾಗುತ್ತಿದೆ.
ಈ ಮುಂಚೆ ಕೇವಲ ಸೈರನ್ ಮತ್ತು ನೀರಿನ ಪೈಪ್‌ಗ್ಳನ್ನು ಅಳವಡಿಕೆ ಮಾಡಿ ಕೈ ಬಿಡಲಾಗಿತ್ತು. ಈಗ ಸ್ಪಿಂಕ್ಲರ್‌ಗಳನ್ನು ಅಳವಡಿಸಿ ಕಾಮಗಾರಿಗೆ ಕೊನೆ ಹಾಡಲಾಗುತ್ತಿದೆ. ಯಾವುದೇ ಬಹುಮಹಡಿ ಕಟ್ಟಡ ಕಟ್ಟಬೇಕಾದರೆ ಅಗ್ನಿಶಾಮಕ ದಳದ ಪರವಾನಗಿ ಬೇಕು. ಕಟ್ಟಡ ಮುಗಿದ ಮೇಲೆ ಕೂಡ ಎಲ್ಲ ಸುಸಜ್ಜಿತವಾಗಿದ್ದರೆ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡಲಾಗುತ್ತದೆ. ಆದರೆ, ರಿಮ್ಸ್‌ನಲ್ಲಿ ಆರು ಅಂತಸ್ತಿನ ಕಟ್ಟಡವಿದ್ದು, ಅಗ್ನಿ ಅವಘಡ ತಡೆಗೆ ಈ ಹಿಂದೆ ಪೈಪ್ ಗಳನ್ನು ಅಳವಡಿಕೆ ಮಾಡಲಾಗಿತ್ತು. ಅಗ್ನಿ ಅವಘಡ ಸಂಭವಿಸಿದರೆ ಸೈರನ್ ಮಾಡುವ ಯಂತ್ರಗಳನ್ನು ಅಳವಡಿಸಲಾಗಿತ್ತು. ಆದರೆ, ಅಗ್ನಿ ನಂದಿಸಲು ಬೇಕಾದ ನೀರು ಸಿಂಪರಣೆಗೆ ವ್ಯವಸ್ಥೆಯೇ ಇರಲಿಲ್ಲ. ಅಗ್ನಿ ಅನಾಹುತ ಜರುಗಿದರೆ ಬೆಂಕಿ ನಂದಿಸುವಷ್ಟರಲ್ಲಿ ಸಿಬ್ಬಂದಿ ಹೈರಾಣಾಗಬೇಕಾಗಿತ್ತು. ಇದರಿಂದ ಅಗ್ನಿ ಶಾಮಕ ದಳ ಅಧಿಕಾರಿಗಳು ಕೆಲವೊಂದು ನ್ಯೂನತೆಗಳಿದ್ದು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದರು. ಅವುಗಳನ್ನು ಸರಿಪಡಿಸಿಕೊಂಡು ಅನುಷ್ಠಾನ ವರದಿ ನೀಡಲು ಸೂಚಿಸಿದ್ದರು.
2017ರಲ್ಲಿ ಪ್ರಸ್ತಾವನೆ: 2017ರ ಮಾರ್ಚ್‌ನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಂದಾಜುಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ 2018ರಲ್ಲಿ ಮಂಜೂರಾತಿ ನೀಡಿದ್ದು, ಲೋಕೋಪಯೋಗಿ ಇಲಾಖೆಯಿಂದಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಐಸಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆಗೆ 2.35 ಕೋಟಿ ರೂ.ಗೆ ಟೆಂಡರ್ ವಹಿಸಲಾಗಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಮುಗಿಯಲಿದೆ.
ಏನಿದು ವ್ಯವಸ್ಥೆ?: ಜನವಸತಿ ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ತುರ್ತು ಕ್ರಮ ಕೈಗೊಳ್ಳಲು ಇಂಥ ನೀರಿನ ಸಿಂಪರಣೆ ಸಂಪರ್ಕ ಕಲ್ಪಿಸಲಾಗುತ್ತದೆ. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಸೈರನ್ ಬಾರಿಸಿಕೊಳ್ಳಲಿದ್ದು, ಕೂಡಲೇ ಸ್ಪಿಂಕ್ಲರ್ ಗಳಿಂದ ನೀರಿನ ಸಿಂಪರಣೆಯಾಗುತ್ತದೆ. ರೋಗಿಗಳಿರುವ ಕಾರಣ ಅವರನ್ನು ಕಾಪಾಡುವುದು, ಮತ್ತೂಂದು ಸ್ಥಳಕ್ಕೆ ಕರೆದೊಯ್ಯುವುದು ಕಷ್ಟದ ಕೆಲಸವಾದ್ದರಿಂದ ಈ ಯೋಜನೆ ಅನುಕೂಲವಾಗಲಿದೆ.
ನಿರ್ವಹಣೆ ಬಗ್ಗೆ ಟೀಕೆ: ಈ ಕಾಮಗಾರಿ ನಿರ್ವಹಣೆ ವೇಳೆ ರೋಗಿಗಳಿದ್ದರೂ ವೆಲ್ಡಿಂಗ್ ಮಾಡಲಾಗುತ್ತಿದೆ ಎನ್ನುವ ದೂರು ಕೇಳಿ ಬಂದಿದ್ದವು. 500 ಬೆಡ್‌ಗಳ ಸಾಮರ್ಥ್ಯದ ಆಸ್ಪತ್ರೆಗೆ ನಿತ್ಯ
700ಕ್ಕೂ ಅ ಧಿಕ ರೋಗಿಗಳು ಬರುತ್ತಿದ್ದಾರೆ. ಬೆಡ್‌ಗಳ ಕೊರತೆ ಇದೆ. ರೋಗಿಗಳನ್ನು ಬೇರೆ ಕಡೆ ಸ್ಥಳಾಂತರಕ್ಕೂ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ರೋಗಿಗಳಿಗೆ ಧಕ್ಕೆ ಆಗದ ರೀತಿಯಲ್ಲೇ ಕೆಲಸ ನಿರ್ವಹಿಸಲು ಸೂಚಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.