Advertisement
ಬೆಳಗ್ಗೆ 8:08 ಗಂಟೆಯಿಂದ ಬೆಳಗ್ಗೆ 11:08 ಗಂಟೆಯವರೆಗೂ ಗ್ರಹಣವಿತ್ತು. ಆದರೆ, ಬೆಳಗ್ಗೆ ಜಿಲ್ಲಾದ್ಯಂತ ಸಂಪೂರ್ಣ ಮೋಡ ಕವಿದ ವಾತಾವರಣದ ಜತೆಗೆ ಮಂಜು ಆವರಿಸಿತ್ತು. ಜನ ಗ್ರಹಣ ವೀಕ್ಷಣೆಗೆ ಮುಂದಾದರೂ ಕಾಣಲಿಲ್ಲ. ಟಿವಿಗಳಲ್ಲೇ ಬೇರೆ ಭಾಗದಲ್ಲಿ ಸಂಭವಿಸುತ್ತಿದ್ದ ಗ್ರಹಣ ನೋಡಿ ಖುಷಿ ಪಟ್ಟರು.
Related Articles
Advertisement
ಗ್ರಹಣದ ಬಳಿಕ ವಿಶೇಷ ಪೂಜೆ ನಡೆಯಿತು. ನಗರದ ಡಾ| ಅಂಬೇಡ್ಕರ್ ವೃತ್ತದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ಅವಕಾಶ ನೀಡಿತ್ತು. ಅದರ ಜತೆಗೆ ವಿಜ್ಞಾನ ಶಿಕ್ಷಕರು, ಪ್ರಗತಿಪರ ಚಿಂತಕರು, ಅಧಿಕಾರಿಗಳುಗ್ರಹಣದ ವೇಳೆ ಉಪಹಾರ ಸೇವಿಸುವ ಮೂಲಕ ಮೌಡ್ಯ ನಿವಾರಣೆಗೆ ಜಾಗೃತಿ ಮೂಡಿಸಿದರು. ಹಳ್ಳಿಗಳಲ್ಲಿ ಗ್ರಹಣದ ವೇಳೆ ಪಾತ್ರೆಯಲ್ಲಿ ಒನಕೆ ನಿಲ್ಲಿಸಿದ್ದು ಕಂಡುಬಂತು. ಗೋನಾಳ ಗ್ರಾಮದಲ್ಲಿ ಇದೇ ರೀತಿ ಮಾಡಲಾಗಿತ್ತು. ಗ್ರಹಣ ಬಿಟ್ಟ ನಂತರ ಒನಕೆ ತನ್ನಿಂತಾನೆ ಕೆಳಗೆ ಬಿದ್ದಿದ್ದು ಕಂಡು ಜನ ಅಚ್ಚರಿಗೊಳಗಾದರು. ಗುರುವಾರ ಎಳ್ಳ ಅಮಾವಾಸ್ಯೆ ಇರುವುದರಿಂದ ರೈತಾಪಿ ವರ್ಗ ಹೊಲಗಳಿಗೆ ಸರಗ ಚೆಲ್ಲಲು ಕಾದು ಕುಳಿತಿದ್ದರು. ಗ್ರಹಣ ಬಿಟ್ಟ ಮೇಲೆ ಸ್ನಾನ ಮುಗಿಸಿ ಅಡುಗೆ ಮಾಡಿ ಭೂತಾಯಿಗೆ ಸರಗ ಚೆಲ್ಲಲಾಯಿತು. ಗ್ರಹಣ ವೀಕ್ಷಣೆ ವ್ಯವಸ್ಥೆ: ನಗರದ ಮಾವಿನಕರೆ ಉದ್ಯಾನವನದ ಬಳಿ ಎಐಡಿಎಸ್‌ಒ ಸಂಘಟನೆಯಿಂದ ಗುರುವಾರ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬ್ರೇಕ್ ಥ್ರೂ ಸೈನ್ಸ್ ಸೊಸೈಟಿಯಿಂದ ಸನ್ ಫಿಲ್ಟರ್ ಕನ್ನಡಕ ನೀಡಿ ಅದರ ಮೂಲಕ ಗ್ರಹಣ ನೋಡಲು ಸೂಚಿಸಲಾಯಿತು. ಗ್ರಹಣ ಕುರಿತು ಜನರಲ್ಲಿರುವ ಮೌಡ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ಥಳದಲ್ಲೇ ಉಪಾಹಾರ ನೀಡಲಾಯಿತು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಪೀರ್‌ಸಾಬ್, ಸಹ ಕಾರ್ಯದರ್ಶಿ ಹೇಮಂತ, ಕಾರ್ತಿಕ, ಎಐಡಿವೈಒನ ಚನ್ನಬಸವ ಜಾನೇಕಲ್, ವಿನೋದಕುಮಾರ, ಪ್ರಕಾಶ,
ಮೆಹಬೂಬ್ ಸೇರಿದಂತೆ ಅನೇಕರಿದ್ದರು. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ: ಇಲ್ಲಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ರಹಣ ವೀಕ್ಷಣೆಗೆ ಅನುವು ಮಾಡಲಾಗಿತ್ತು. ಗ್ರಹಣ ಶುರುವಾಗುತ್ತಿದ್ದಂತೆ ಕೇಂದ್ರಕ್ಕೆ ಆಗಮಿಸಿದ ಜನ ಅಪರೂಪದ ಖಗೋಳ ವಿದ್ಯಮಾನ ವೀಕ್ಷಿಸಿದರು. ಹಂತ ಹಂತವಾಗಿ ಮೋಡಗಳು ತಿಳಿಯಾಗುತ್ತಿದ್ದಂತೆ ಸೂರ್ಯನ ಗೋಚರವಾಯಿತು. ಗ್ರಹಣದ ಮಧ್ಯಕಾಲವನ್ನು ಜನ ಕಣ್ತುಂಬಿಕೊಂಡು ಸಂತಸ ವ್ಯಕ್ತಪಡಿಸಿದರು. ಟೆಲಿಸ್ಕೋಪ್, ಸೋಲಾರ್ ಫಿಲ್ಟರ್ ಕನ್ನಡಕ ಮೂಲಕ ಜನ ಗ್ರಹಣ ವೀಕ್ಷಿಸಿದರು. ಅದರ ಜತೆಗೆ ನೆಹರು ತಾರಾಲಯದಿಂದ ನೀಡಿದ ಗ್ರಹಣದ ಕಿಟ್‌ನ ಪಿನ್ ಹೋಲ್ ಕ್ಯಾಮೆರಾದ ಮೂಲಕ ಗ್ರಹಣದ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಮನ್ಸಲಾಪುರದ ನೇತಾಜಿ ಶಾಲೆ: ತಾಲೂಕಿನ ಮನ್ಸಲಾಪುರದ ನೇತಾಜಿ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗ್ರಹಣ ವೀಕ್ಷಿಸಿದರು. ಶಿಕ್ಷಕರು ಗ್ರಹಣದ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಹನುಮಂತ ಸಾಗರ, ಸಹ ಶಿಕ್ಷಕ ಜಲಾಲ್ ಸೇರಿದಂತೆ ವಿದ್ಯಾರ್ಥಿಗಳಿದ್ದರು.